ಕ್ರೆಡಿಟ್ ಬಳಕೆದಾರರು ದೇಶಾದ್ಯಂತ ಹೆಚ್ಚುತ್ತಲೇ ಇದ್ದಾರೆ. ಇದಕ್ಕೆ ಕಾರಣ ಕೊರೊನಾ ದಾಳಿ ಎದುರಿಸುತ್ತಾ, ಆರ್ಥಿಕ ಸಂಕಷ್ಟಕ್ಕೆ ದೂಡಲ್ಪಟ್ಟಿರುವ ಲಕ್ಷಾಂತರ ಕುಟುಂಬಗಳು. ಮತ್ತೊಂದು ಕಾರಣ, ಮಾಸಿಕ ಕಂತುಗಳಲ್ಲಿ ಮನೆಗೆ ಅಗತ್ಯ ವಸ್ತುಗಳ ಖರೀದಿ ಮಾಡುವ ಅಭ್ಯಾಸವು ಜನರಲ್ಲಿ ಹೆಚ್ಚುತ್ತಿರುವುದು.
ತಮ್ಮ ಮಾಸಿಕ ಆದಾಯ ಕಡಿಮೆಯಿದ್ದರೂ, ಕ್ರೆಡಿಟ್ ಕಾರ್ಡ್ ಸಾಲದ ಮೂಲಕ ಒಂದೇ ಬಾರಿ ವಾಷಿಂಗ್ ಮೆಷಿನ್, ಫ್ರಿಡ್ಜ್ ಖರೀದಿ ಮಾಡುವುದು. ನಂತರ ಕ್ರೆಡಿಟ್ ಕಾರ್ಡ್‌ನ ಸಾಲವನ್ನು ಕಂತಿನಲ್ಲಿ ತೀರಿಸಿಕೊಳ್ಳುತ್ತಾ ಹೋಗುವ ಖಯಾಲಿ ಜನರಲ್ಲಿಹೆಚ್ಚುತ್ತಿದೆ.
ಬ್ಯಾಂಕ್‌ಗಳಲ್ಲಿ ಸಾಲ, ಅದಕ್ಕೆ ಬಡ್ಡಿ ಕಟ್ಟುವ ಫಜೀತಿಗಿಂತ ಕ್ರೆಡಿಟ್ ಕಾರ್ಡ್ ಉತ್ತಮ ಎನ್ನುವುದು ಹಲವರ ಅಭಿಪ್ರಾಯ.
ಆದರೆ ಇಂಥ ಕ್ರೆಡಿಟ್ ಕಾರ್ಡ್‌ನ ಸುರಕ್ಷತೆ ಬಹಳ ಮುಖ್ಯವಾಗಿದೆ. ಹ್ಯಾಕರ್ಸ್‌ಗಳು ಸದಾಕಾಲ ಕ್ರೆಡಿಟ್ ಕಾರ್ಡ್ ಬಳಕೆದಾರರ ಖಾಸಗಿ ಮಾಹಿತಿ ಕಳವಿಗೆ ಹೊಂಚು ಹಾಕುತ್ತಿರುತ್ತಾರೆ.
ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಕರೆಗಳನ್ನು ಕೂಡ ಮಾಡಿ ಜನರನ್ನು ಯಾಮಾರಿಸುತ್ತಾರೆ. ಹಾಗಾಗಿ, ಕ್ರೆಡಿಟ್ ಕಾರ್ಡ್ ಬಳಕೆದಾರರು ಕಡ್ಡಾಯವಾಗಿ ತಮ್ಮ ಕಾರ್ಡಿನ ಹಿಂಬದಿಯಲ್ಲಿ ಅಧಿಕೃತ ಖಾಸಗಿ ಸಹಿ ಮಾಡಿರಬೇಕು. ಪಾಸ್‌ವರ್ಡ್ ಯಾವುದೇ ಕಾರಣಕ್ಕೂ ಹಂಚಿಕೊಳ್ಳಬಾರದು. ಅದು ವಿಶ್ವಾಸಾರ್ಹರಾಗಿದ್ದರೂ ಸರಿಯೇ. ಅದಕ್ಕೂ ಮುಖ್ಯವಾಗಿ ಪಾಸ್‌ವರ್ಡ್ ರಚನೆ ವೇಳೆ, ಜನ್ಮ ದಿನಾಂಕ, ಪತ್ನಿ-ಮಕ್ಕಳ ಹೆಸರುಗಳನ್ನು ಬಳಸುವುದನ್ನು ತಪ್ಪಿಸಿರಿ. ಇದು ಪಾಸ್‌ವರ್ಡ್ ಊಹೆ ಮಾಡಲು ಹ್ಯಾಕರ್ಸ್‌ಗಳಿಗೆ ಸುಲಭವಾಗಲಿದೆ.
ಎಟಿಎಂನಲ್ಲಿ ಪಾಸ್‌ವರ್ಡ್ ಬದಲಾವಣೆ ಮಾಡುವ ವೇಳೆ ಬಹಳ ಎಚ್ಚರಿಕೆ ವಹಿಸಿರಿ. ಸುತ್ತಲೂ ಒಂದು ಬಾರಿ ಗಮನಿಸಿ, ನಿಮ್ಮ ಮೇಲೆ ನಿಗಾ ಇರಿಸಿರಬಹುದಾದ ವ್ಯಕ್ತಿಗಳನ್ನು ಖಾತ್ರಿಪಡಿಸಿಕೊಳ್ಳಿರಿ. ಸುರಕ್ಷಿತ ವಾತಾವರಣ ಎನಿಸಿದ ನಂತರವೇ ಪಾಸ್‌ವರ್ಡ್ ಬದಲಾಯಿಸಿರಿ. ಕಾರ್ಡ್‌ನ ಹಿಂಬದಿಯ ’ಸಿವಿವಿ’ ಸಂಖ್ಯೆಯನ್ನು ಯಾವುದೇ ಕಾರಣಕ್ಕೂ ಬಹಿರಂಗಪಡಿಸಬೇಡಿ. ಬ್ಯಾಂಕ್ ಮ್ಯಾನೇಜರ್ ಕೇಳಿದರೂ ಕೂಡ ಕೊಡುವ ಅಗತ್ಯವಿಲ್ಲ ಎನ್ನುವುದು ಗಮನದಲ್ಲಿರಿಸಿ.
ಒಂದು ವೇಳೆ ಕಾರ್ಡ್ ಕಳೆದುಹೋದರೆ, ಕೂಡಲೇ ಬ್ಯಾಂಕ್‌ನ ಸಹಾಯವಾಣಿಗೆ ಕರೆ ಮಾಡಿ, ಕಾರ್ಡ್ ಬ್ಲಾಕ್ ಮಾಡಿಸಿರಿ. ನಂತರ ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ಒಂದು ದೂರು ಕೊಟ್ಟುಬಿಡಿ. ದೂರಿನ ಪ್ರತಿಯನ್ನು ಬ್ಯಾಂಕ್‌ನ ಅಧಿಕಾರಿಗಳಿಗೂ ಸಲ್ಲಿಸಿ, ನಿಮ್ಮ ಕಾರ್ಡ್ ದುರ್ಬಳಕೆ ಆಗುವುದನ್ನು ತಡೆಯಬಹುದು.