ಹಬ್ಬಗಳಲ್ಲಿ ಶ್ಯಾವಿಗೆ, ಗಸಗಸೆ, ಹೆಸರುಬೇಳೆ ಪಾಯಸ ತಯಾರಿಸುವುದು ಕಾಮನ್. ಅದಕ್ಕೆ ಬದಲಾಗಿ ವಿಶೇಷವಾಗಿ ಅವಲಕ್ಕಿ ಪಾಯಸ ಮಾಡಬಹುದು. ಇದೂ ಕೂಡ ಇತರೆ ಕೀರು ತಿಂದಷ್ಟೇ ರುಚಿಯಾಗಿರುತ್ತದೆ. ಇಲ್ಲಿದೆ ನೋಡಿ ಅವಲಕ್ಕಿ ಪಾಯಸ ತಯಾರು ಮಾಡುವ ವಿಧಾನ.
ಬೇಕಾಗುವ ಸಾಮಾಗ್ರಿಗಳು :
ದಪ್ಪ ಅವಲಕ್ಕಿ – 200 ಗ್ರಾಂ
ಬೆಲ್ಲ – 1/4 ಕೆಜಿ
ಹಾಲು – 1/2 ಲೀಟರ್
ಏಲಕ್ಕಿ – 4
ದ್ರಾಕ್ಷಿ – ಗೋಡಂಬಿ – 4 ರಿಂದ 5
ಕಾಯಿತುರಿ ಹಾಲು – 1/2 ಲೋಟ
ಮಾಡುವ ವಿಧಾನ :
ಅವಲಕ್ಕಿಯನ್ನು ಸ್ವಲ್ಪ ತುಪ್ಪ ಹಾಕಿ ಕಂದುಬಣ್ಣಕ್ಕೆ ಬರುವವರೆಗೂ ಹುರಿದುಕೊಳ್ಳಿ. ಒಂದು ಪಾತ್ರೆಯಲ್ಲಿ ಹಾಲನ್ನು ಹಾಕಿ ಕಾದ ನಂತರ ಅದಕ್ಕೆ ಬೆಲ್ಲವನ್ನು ಹಾಕಿ.
ಹಾಲು ಕುದಿಯಲು ಪ್ರಾರಂಭಿಸಿದಾಗ ಮೊದಲೆ ಹುರಿದಿಟ್ಟುಕೊಂಡ ಅವಲಕ್ಕಿಯನ್ನು ಹಾಕಿ ತಳಹಿಡಿಯದಂತೆ ಕಲೆಸುತ್ತಾ ಇರಿ. ಅವಲಕ್ಕಿ ಬೆಂದ ನಂತರ ಕಾಯಿತುರಿಯನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿ ಸೊಸಿ ಹಾಲನ್ನು ತೆಗೆದು, ಅದನ್ನು ಕುದಿಯುತ್ತಿರುವ ಮಿಶ್ರಣಕ್ಕೆ ಹಾಕಿ ಐದು ನಿಮಿಷ ಕುದಿಸಿರಿ.
ನಂತರ ಒಲೆಯಿಂದ ಇಳಿಸಿ ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ ಹಾಗೂ ಪುಡಿಮಾಡಿದ ಏಲಕ್ಕಿಯನ್ನು ಹಾಕಿದರೆ ಅವಲಕ್ಕಿ ಪಾಯಸ ಸವಿಯಲು ಸಿದ್ದ.