ಮದುವೆ, ಗಂಡ, ಮನೆ ಇವೆಲ್ಲವೂ ಒಮ್ಮೊಮ್ಮೆ ಕಲ್ಪನೆಗಿಂತ ಭಿನ್ನವಾಗಿರುತ್ತವೆ. ಮದುವೆಯಾದ ಹೊಸದರಲ್ಲಿ ಪತಿ, ಪತ್ನಿ ಒಟ್ಟಿಗೆ ಕುಳಿತು ಹರಟೋದು, ಸಿನೆಮಾ ನೋಡೋದು, ಇಷ್ಟ ಬಂದಲ್ಲಿ ಓಡಾಡೋದು ಕಾಮನ್. ಆದ್ರೆ ಮದುವೆಗೆ ಹಾಕಿದ್ದ ರಜಾ ಮುಗಿದು ಪತಿ-ಪತ್ನಿ ಇಬ್ಬರೂ ಕೆಲಸಕ್ಕೆ ಹೋಗಲು ಆರಂಭಿಸಿದ್ಮೇಲೆ ಅಸಲಿ ಗೇಮ್ ಶುರುವಾಗುತ್ತದೆ.
ಬೆಳಗ್ಗೆ ಎಲ್ಲಾ ಮನೆಗೆಲಸ ಮುಗಿಸಿ, ತಿಂಡಿ ತಯಾರಿಸಿ ಮಧ್ಯಾಹ್ನ ಊಟಕ್ಕೆ ಡಬ್ಬಿ ರೆಡಿ ಮಾಡಿ ಗಂಡನಿಗೆ ಕೊಟ್ಟು, ತಾನು ತೆಗೆದುಕೊಂಡು ಆಫೀಸ್ ತಲುಪುವಷ್ಟರಲ್ಲಿ ಹೆಂಡತಿ ಸುಸ್ತಾಗಿರ್ತಾಳೆ. ಎಷ್ಟೋ ಬಾರಿ ಕೆಲಸದ ಒತ್ತಡದಲ್ಲಿ ಕಚೇರಿಗೆ ತಡವಾಗಿ ಹೋಗಿ ಬೈಸಿಕೊಳ್ಳೋದೂ ಉಂಟು.
ಹಾಗಾಗಿ ಮನೆಗೆಲಸದಲ್ಲಿ ಪತಿ ಕೂಡ ಕೊಂಚ ಸಹಾಯ ಮಾಡಲಿ ಅಂತಾನೇ ಎಲ್ಲರೂ ಬಯಸ್ತಾರೆ. ಆದ್ರೆ ಎಷ್ಟೋ ಮನೆಗಳಲ್ಲಿ ಗಂಡ, ಹೆಂಡತಿಗೆ ಕೊಂಚವೂ ಸಹಾಯ ಮಾಡಲು ಮುಂದಾಗುವುದೇ ಇಲ್ಲ. ಅಂತಹ ಸಂದರ್ಭದಲ್ಲಿ ಪತ್ನಿಯಾದವಳು ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಅನ್ನೋದೇ ಸವಾಲು.
ನಿತ್ಯದ ಕೆಲಸ ನಿಭಾಯಿಸುವಲ್ಲಿ ನಿಮ್ಮ ಮುಂದಿರುವ ಸವಾಲು ಹಾಗೂ ಜವಾಬ್ಧಾರಿಗಳ ಬಗ್ಗೆ ನಿಮ್ಮ ಪತಿಯೊಂದಿಗೆ ಮುಕ್ತವಾಗಿ ಚರ್ಚಿಸಿ.
ಪತಿಗೆ ಯಾವ ಕೆಲಸದಲ್ಲಿ ಆಸಕ್ತಿ ಇದೆ ಎಂಬುದನ್ನು ತಿಳಿದುಕೊಳ್ಳಿ. ಅದಕ್ಕೆ ಅನುಗುಣವಾಗಿ ಕೆಲಸಗಳನ್ನು ಹಂಚಿಕೊಂಡು ಮಾಡಲು ಪ್ರಯತ್ನಿಸಿ.
ಪತಿ ಯಾವುದಾದರೂ ಕೆಲಸ ಮಾಡುವ ಸಂದರ್ಭದಲ್ಲಿ ಅದನ್ನು ಟೀಕಿಸಬೇಡಿ. ಸರಿಯಾಗಿಲ್ಲ ಎಂದಾದಲ್ಲಿ ನಿಧಾನವಾಗಿ ತಿಳಿಸಿ ಹೇಳಲು ಪ್ರಯತ್ನಿಸಿ.
ಪತಿಯಿಂದ ಸಹಾಯದ ನಿರೀಕ್ಷೆ ಇದ್ದಾಗ ಜೋರಾಗಿ ಕೂಗಾಡುವುದು, ಜಗಳ ಮಾಡುವುದು ಬೇಡ. ಆತ ಯಾವ ಕೆಲಸ ಮಾಡಬೇಕೆಂಬ ಬಗ್ಗೆ ನಿಧಾನವಾಗಿ ಹೇಳಿ. ನೀವು ಅಧಿಕಾರ ಚಲಾಯಿಸುತ್ತಿದ್ದೀರೆಂಬ ಭಾವನೆ ಮೂಡದಂತೆ ಎಚ್ಚರ ವಹಿಸಿ.
ಅವರ ಕೆಲಸವನ್ನು ಶ್ಲಾಘಿಸಿ. ಇದರಿಂದ ನಿಮಗೆ ಸಹಾಯ ಮಾಡಲು ಪತಿಯನ್ನು ಉತ್ತೇಜಿಸಿದಂತಾಗುತ್ತದೆ. ಅವರ ಶ್ರಮವನ್ನು ಗುರುತಿಸಿ.