
ದೀಪಾವಳಿ ಹಿಂದೂಗಳಿಗೆ ಎಷ್ಟು ಸಂಭ್ರಮವನ್ನು ತರುವ ಹಬ್ಬವೋ, ಪ್ರಾಣಿಗಳಿಗೆ ಅಷ್ಟೇ ಸಮಸ್ಯೆಯನ್ನು ತಂದೊಡ್ಡಬಲ್ಲದು. ಪ್ರಸ್ತುತ ದೇಶದ ಕೆಲವು ಕಡೆ ಪಟಾಕಿ ಹಚ್ಚುವುದಕ್ಕೆ ನಿರ್ಬಂಧ ಹೇರಲಾಗಿದೆ. ಆದರೂ ದೊಡ್ಡ ಸದ್ದಿನ ಪಟಾಕಿ ಸಿಡಿಸುವುದು ಸಾಮಾನ್ಯ. ಒಂದು ವೇಳೆ ನೀವು ಸಾಕು ಪ್ರಾಣಿಗಳನ್ನು ಹೊಂದಿದ್ದರೆ ನಿಮ್ಮ ಮನೆಯ ಸುತ್ತ ಯಾರಾದರೂ ಪಟಾಕಿ ಪ್ರಿಯರಿದ್ದರೆ ನೀವು ಈ ಎಲ್ಲಾ ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ.
1. ಮುಂಜಾನೆಯೇ ನಿಮ್ಮ ನಾಯಿಯನ್ನು ವಾಕಿಂಗ್ಗೆ ಕರೆದುಕೊಂಡು ಹೋಗಿ
ಮುಂಜಾನೆ 6 ಗಂಟೆಗೇ ಪಟಾಕಿಗಳ ಆರ್ಭಟ ಮಾಡುವವರು ಯಾರೂ ಇರೋದಿಲ್ಲ. ಹೀಗಾಗಿ ಈ ಸಮಯಾವಕಾಶವನ್ನು ನೀವು ಬಳಸಿಕೊಳ್ಳಬಹುದು. ಇದರಿಂದ ನಿಮಗೆ ಶಾಂತಿಯಿಂದ ನಾಯಿಯನ್ನು ವಿಹಾರಕ್ಕೆ ಕರೆದುಕೊಂಡು ಹೋಗಲು ಸಾಧ್ಯವಾಗುತ್ತದೆ.
2. ಮೊದಲು ನೀವು ತಾಳ್ಮೆಯಿಂದ ವರ್ತಿಸಿ
ಪ್ರಾಣಿಗಳಿಗೆ ಬೇಗನೇ ಪರಿಸ್ಥಿತಿಯ ಅರಿವಾಗಿಬಿಡುತ್ತದೆ. ಪಟಾಕಿಗಳ ಸದ್ದಿಗೆ ಅವು ಕಿರಿಕಿರಿ ಮಾಡುವ ಸಾಧ್ಯತೆಯೂ ಇರುತ್ತದೆ. ಈ ಸಂದರ್ಭದಲ್ಲಿ ನೀವು ತಾಳ್ಮೆಗೆಡಬೇಡಿ. ನಿಮ್ಮ ಮನೆಯ ಸಾಕು ಪ್ರಾಣಿಯು ಪಟಾಕಿ ಸದ್ದಿಗೆ ಹೆದರುತ್ತಿದ್ದರೆ ಅದಕ್ಕೆ ಹೆಚ್ಚಿನ ಕಾಳಜಿ ತೋರಿಸಿ. ಅವುಗಳ ಜೊತೆ ಆಟವಾಡುವ ಮೂಲಕ ಗಮನ ಬೇರತ್ತ ಸೆಳೆಯಲು ಯತ್ನಿಸಿ.
3. ಮುಂಜಾಗ್ರತಾ ಕ್ರಮ ಅಗತ್ಯ
ದೀಪಾವಳಿ ಹಬ್ಬ ಹತ್ತಿರವಾಗುತ್ತಿರೋದ್ರಿಂದ ಈಗಲೇ ನಿಮ್ಮ ಪ್ರಾಣಿಯ ಒತ್ತಡವನ್ನು ಕಡಿಮೆ ಮಾಡಲು ಯತ್ನಿಸಿ. ಪ್ರಾಣಿಗಳಿಗೆ ದೊಡ್ಡ ಶಬ್ದಗಳ ಪರಿಚಯ ಮಾಡಿಸಿ. ನಿಮ್ಮ ಮೊಬೈಲ್ನಲ್ಲಿಯೇ ಪಟಾಕಿ ಸದ್ದುಗಳನ್ನು ಕೇಳಿಸಿ. ಅಲ್ಲದೇ ಇಂತಹ ಸಂದರ್ಭಗಳಲ್ಲಿ ಪ್ರಾಣಿಗಳ ಒತ್ತಡವನ್ನು ಕಡಿಮೆ ಮಾಡಲು ಪಶು ವೈದ್ಯಾಧಿಕಾರಿಗಳ ಸಲಹೆಯನ್ನೂ ನೀವು ಪಡೆಯಬಹುದು.
4. ಪ್ರಾಣಿಗಳಿಗೆ ಮನೆಯಲ್ಲಿ ಅಡಚಣೆ ಉಂಟಾಗದಂತೆ ನೋಡಿಕೊಳ್ಳಿ
ಮನೆಯ ತುಂಬೆಲ್ಲ ಅವುಗಳ ಪ್ರೀತಿಯ ಆಟಿಕೆಗಳು ಹಾಗೂ ತಿನಿಸುಗಳನ್ನು ತಂದಿಟ್ಟುಕೊಳ್ಳಿ. ಪ್ರಾಣಿಗಳು ಮಲಗಲು ಹಾಯಾದ ವ್ಯವಸ್ಥೆ ಮಾಡಿ. ಸಂಜೆಯಾಗುತ್ತಿದ್ದಂತೆಯೇ ಮನೆಯ ಬಾಗಿಲು, ಕಿಟಕಿಗಳನ್ನು ಮುಚ್ಚಿ ಪರದೆ ಹಾಕಿಬಿಡಿ. ಇದರಿಂದ ಸದ್ದು ಚಿಕ್ಕದಾಗಿ ಕೇಳಲಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಇಂತಹ ಸಂದರ್ಭಗಳಲ್ಲಿ ಪ್ರಾಣಿಗಳನ್ನು ಒಂಟಿಯಾಗಿ ಬಿಡಬೇಡಿ.