ಹಬ್ಬಹರಿದಿನಗಳು ಬಂದಾಗ ಮನೆಯಲ್ಲಿ ಖರ್ಜಿಕಾಯಿ ಮಾಡಿಕೊಂಡು ಸವಿಯುತ್ತೇವೆ. ದೇವರಿಗೆ ನೈವೇದ್ಯಕ್ಕೂ ಇದನ್ನು ಇಡುತ್ತೇವೆ. ರುಚಿಕರವಾದ ಖರ್ಜಿಕಾಯಿ ಮಾಡುವ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಸಾಮಾಗ್ರಿಗಳು:
1 ಕಪ್ ಮೈದಾ ಹಿಟ್ಟು, 2 ಟೇಬಲ್ ಸ್ಪೂನ್ – ಬಿಸಿ ಎಣ್ಣೆ, 1 ಗ್ಲಾಸ್ – ಬಿಸಿ ನೀರು, ಎಣ್ಣೆ ಕರಿಯಲು, ½ ಕಪ್ ಪುಟಾಣಿ ಕಡಲೆ, ¾ ಕಪ್ – ಸಕ್ಕರೆ ಪುಡಿ, ½ ಕಪ್ – ಕೊಬ್ಬರಿ ತುರಿ, ¼ ಟೀ ಸ್ಪೂನ್ – ಏಲಕ್ಕಿ ಪುಡಿ.
ಮಾಡುವ ವಿಧಾನ:
ಒಂದು ಅಗಲವಾದ ಬೌಲ್ ತೆಗೆದುಕೊಂಡು ಅದಕ್ಕೆ ಮೈದಾ ಹಿಟ್ಟು, ಬಿಸಿಎಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಸ್ವಲ್ಪ ಸ್ವಲ್ಪವೇ ಬಿಸಿ ನೀರು ಸೇರಿಸಿ ಚೆನ್ನಾಗಿ ನಾದಿಕೊಂಡು ಮುದ್ದೆ ರೀತಿ ಕಟ್ಟಿಕೊಳ್ಳಿ.
ಇದನ್ನು 1 ಗಂಟೆಗಳ ಕಾಲ ಹಾಗೆಯೇ ಒಂದು ಪ್ಲೇಟ್ ಮುಚ್ಚಿ ಇಡಿ. ನಂತರ ಪುಟಾಣಿಯನ್ನು 2 ನಿಮಿಷಗಳ ಕಾಲ ಹುರಿದುಕೊಂಡು ಒಂದು ಮಿಕ್ಸಿ ಜಾರಿನಲ್ಲಿ ಪುಡಿ ಮಾಡಿಕೊಂಡು ಇದನ್ನು ಜರಡಿ ಹಿಡಿದುಕೊಳ್ಳಿ. ಕೊಬ್ಬರಿ ತುರಿಯನ್ನು ಒಂದು ಪ್ಯಾನ್ ಗೆ ಹಾಕಿ 3 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ.
ನಂತರ ಒಂದು ತಟ್ಟೆಗೆ ಪುಟಾಣಿ ಹಿಟ್ಟು, ಸಕ್ಕರೆ ಪುಡಿ, ಕೊಬ್ಬರಿ ತುರಿ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಮಾಡಿಟ್ಟುಕೊಂಡ ಹಿಟ್ಟಿನಿಂದ ಚಿಕ್ಕ ಉಂಡೆ ಮಾಡಿಕೊಂಡು ಚಿಕ್ಕ ಚಪಾತಿ ರೀತಿ ಲಟ್ಟಿಸಿಕೊಂಡು ಅದರ ಮಧ್ಯೆ ಈ ಪುಡಿಯ ಮಿಶ್ರಣವನ್ನು ಹಾಕಿ ಎರಡೂ ಬದಿಗಳನ್ನು ಮಡಚಿ.
ಇಲ್ಲದಿದ್ದರ ಖರ್ಜಿಕಾಯಿ ಮಾಡುವ ಸಾಧನಕ್ಕೆ ಹಾಕಿ ಕೂಡ ಮಾಡಬಹುದು. ನಂತರ ಕಾದ ಎಣ್ಣೆಯಲ್ಲಿ ಇದನ್ನು ಕರಿದರೆ ರುಚಿಕರವಾದ ಖರ್ಜಿಕಾಯಿ ಸವಿಯಲು ಸಿದ್ಧ.