ಕೇಸರಿಬಾತ್ ಹೆಸರು ಕೇಳುತ್ತಲೇ ಬಾಯಲ್ಲಿ ನೀರು ಬರುತ್ತದೆಯೇ…? ಇಲ್ಲಿ ಅವಲಕ್ಕಿಯಿಂದ ಮಾಡಬಹುದಾದ ರುಚಿಕರವಾದ ಕೇಸರಿಬಾತ್ ಇದೆ. ಮಾಡುವುದಕ್ಕೂ ಸುಲಭ, ತಿನ್ನುವುದಕ್ಕೂ ಚೆನ್ನಾಗಿರುತ್ತದೆ.
ಬೇಕಾಗುವ ಸಾಮಗ್ರಿಗಳು:
ಅವಲಕ್ಕಿ-1/2 ಕಪ್, ಸಕ್ಕರೆ-1/2 ಕಪ್, ತುಪ್ಪ-1/4 ಕಪ್, ಕೇಸರಿ ಬಣ್ಣದ ಫುಡ್ ಕಲರ್-ಚಿಟಿಕೆ, ಏಲಕ್ಕಿ ಪುಡಿ-ಚಿಟಿಕೆ, ನೀರು-1 ಕಪ್, ಗೋಡಂಬಿ-6
ಮಾಡುವ ವಿಧಾನ:
ಮೊದಲಿಗೆ ಒಂದು ಪ್ಯಾನ್ ಗೆ ತುಪ್ಪ ಹಾಕಿ ಬಿಸಿ ಮಾಡಿಕೊಳ್ಳಿ. ಅದು ಬಿಸಿಯಾಗುತ್ತಿದ್ದಂತೆ ಗೋಡಂಬಿ ಹಾಕಿ ಕೆಂಪಾಗುವವರೆಗೆ ಹುರಿದುಕೊಂಡು ಒಂದು ತಟ್ಟೆಗೆ ತೆಗೆದಿಟ್ಟುಕೊಳ್ಳಿ. ನಂತರ ಅವಲಕ್ಕಿಯನ್ನು ಹಾಕಿ ಹುರಿಯಿರಿ. ಇದು ತುಸು ಬಣ್ಣ ಬದಲಾಗುತ್ತಿದ್ದಂತೆ ಗ್ಯಾಸ್ ಆಫ್ ಮಾಡಿ. ತಣ್ಣಗಾದ ಮೇಲೆ ಮಿಕ್ಸಿ ಜಾರಿಗೆ ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ.
ಪ್ಯಾನ್ ನಲ್ಲಿ ಒಂದು ಕಪ್ ನೀರು ಹಾಕಿ ಬಿಸಿ ಮಾಡಿಕೊಳ್ಳಿ. ಅದು ಕುದಿ ಬರುತ್ತಿದ್ದಂತೆ ಅದಕ್ಕೆ ಪುಡಿ ಮಾಡಿಕೊಂಡ ಅವಲಕ್ಕಿಯನ್ನು ಸೇರಿಸಿ ಗಂಟಾಗದಂತೆ ಕದಡುತ್ತಾ ಇರಿ. ಇದಕ್ಕೆ ಚಿಟಿಕೆ ಫುಡ್ ಕಲರ್ ಸೇರಿಸಿ ಮಿಕ್ಸ್ ಮಾಡಿ. ಈ ಮಿಶ್ರಣ ದಪ್ಪಗಾಗುತ್ತಿದ್ದಂತೆ, ಸಕ್ಕರೆ, ತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಹದ ಉರಿಯಲ್ಲಿ ಬೇಯಿಸಿ. ಇದು ತಳ ಬಿಡುತ್ತಿದ್ದಂತೆ ಗ್ಯಾಸ್ ಆಫ್ ಮಾಡಿ ಏಲಕ್ಕಿ ಪುಡಿ, ಗೋಡಂಬಿ ಹಾಕಿದರೆ ರುಚಿಕರವಾದ ಅವಲಕ್ಕಿ ಕೇಸರಿಬಾತ್ ರೆಡಿ.