ಭಾರತೀಯ ನಾಗರಿಕರ ಪಾಲಿಗೆ ಆಧಾರ್ ಕಾರ್ಡ್ ಅತ್ಯಂತ ನಿರ್ಣಾಯಕ ದಾಖಲೆಗಳಲ್ಲಿ ಒಂದು ಮತ್ತು ಅದು ವೈಯಕ್ತಿಕ ಗುರುತನ್ನು ದೃಡೀಕರಿಸುವ ಪ್ರಮುಖ ದಾಖಲೆಯೂ ಹೌದು.
ಅತ್ಯಂತ ಸುಧಾರಿತ ಜಗತ್ತಿನ ಕಡೆಗೆ ನಾವು ಹೆಜ್ಜೆ ಹಾಕುತ್ತಿರುವಾಗ ಡಿಜಿಟಲ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಒಂದೆಡೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಅನೇಕ ಪ್ರಮುಖ ಖಾತೆಗಳ ಜತೆಗೆ ಜೋಡಿಸಲಾಗಿದೆ. ಹೀಗಾಗಿ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿ ಇರಿಸುವುದು ಅತೀ ಅವಶ್ಯ.
ಈ ಕಾರಣಕ್ಕಾಗಿಯೇ ಪ್ರತಿಯೊಬ್ಬರೂ ಆಧಾರ್ ವಂಚನೆಗಳ ಬಗ್ಗೆ ಜಾಗೃತರಾಗಿರಬೇಕು ಮತ್ತು ಅವುಗಳನ್ನು ತಪ್ಪಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಆ ನಿಟ್ಟಿನಲ್ಲಿ ಶಿಫಾರಸುಗಳನ್ನು ಮಾಡಿದೆ.
ಆಧಾರ್ ಎಂದರೇನು?
ಆಧಾರ್ ಎಂಬುದು 12 ಅಂಕಿಯ ಸಂಖ್ಯೆಯಾಗಿದ್ದು, ಭಾರತೀಯ ಪೌರರಿಗೆ ಯುಐಡಿಎಐ ಅಗತ್ಯ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಒದಗಿಸುವಂಥದ್ದು. ಭಾರತೀಯರು ಸ್ವಯಂಪ್ರೇರಣೆಯಿಂದ ಆಧಾರ್ ಸಂಖ್ಯೆಯನ್ನು ಪಡೆಯಲು ನೋಂದಾಯಿಸಿಕೊಳ್ಳಬಹುದು. ಇಂಥವರು ದಾಖಲಾತಿ ಪ್ರಕ್ರಿಯೆಯ ಸಮಯದಲ್ಲಿ ಕನಿಷ್ಟ ಜನಸಂಖ್ಯಾ ಮತ್ತು ಬಯೋಮೆಟ್ರಿಕ್ ಮಾಹಿತಿಯನ್ನು ಒದಗಿಸಬೇಕು. ಒಬ್ಬ ವ್ಯಕ್ತಿಯು ಒಮ್ಮೆ ಮಾತ್ರ ಆಧಾರ್ ಸಂಖ್ಯೆ ಪಡೆಯಬಹುದು.
ಆಧಾರ್ ಸಾಮಾಜಿಕ ಮತ್ತು ಆರ್ಥಿಕ ಸೇರ್ಪಡೆ, ಸಾರ್ವಜನಿಕ ವಲಯದ ವಿತರಣಾ ಸುಧಾರಣೆಗಳು, ಬಜೆಟ್ಗಳನ್ನು ನಿರ್ವಹಿಸುವುದು, ಅನುಕೂಲತೆ ಹೆಚ್ಚಿಸುವುದು ಮತ್ತು ತೊಂದರೆ-ಮುಕ್ತ ಜನಕೇಂದ್ರಿತ ಆಡಳಿತವನ್ನು ಉತ್ತೇಜಿಸಲು ಭಾರತ ಸರ್ಕಾರದ ಕಾರ್ಯತಂತ್ರದ ನೀತಿ ಸಾಧನವೂ ಆಗಿದೆ.
ಆಧಾರ್ ಕಾರ್ಡ್ನಲ್ಲಿ ವ್ಯಕ್ತಿಯ ಜನ್ಮ ದಿನಾಂಕ, ವಿಳಾಸ ಮುಂತಾದ ನಿರ್ಣಾಯಕ ವೈಯಕ್ತಿಕ ವಿವರಗಳು ಇರುತ್ತವೆ. ಇದಲ್ಲದೆ, ಬಯೋಮೆಟ್ರಿಕ್ ಮಾಹಿತಿ ಕೂಡ ಇರುತ್ತದೆ.
ಯುಐಡಿಎಐ ಸೂಚಿಸಿರುವುದೇನು?
ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ಸೆಲ್ ಫೋನ್ ಸಂಖ್ಯೆಯನ್ನು 12-ಅಂಕಿಯ ಗುರುತಿನ ಸಂಖ್ಯೆಯೊಂದಿಗೆ ನಿಯತವಾಗಿ ನವೀಕರಿಸಲು ಮತ್ತು ಪರಿಶೀಲಿಸಬೇಕು ಎಂದು ಯುಐಡಿಎಐ ಸಲಹೆ ನೀಡಿದೆ. ವ್ಯಕ್ತಿಯ ಮೊಬೈಲ್ ಸಂಖ್ಯೆಯು ಆಧಾರ್ಗೆ ಸಂಪರ್ಕಗೊಂಡಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಲು ಕೆಲವೇ ಹಂತಗಳನ್ನು ತೆಗೆದುಕೊಳ್ಳುವ ಸರಳ ವಿಧಾನವನ್ನು ಕೂಡ ಅದು ಪ್ರಕಟಿಸಿದೆ.
ನಿಮ್ಮ ಮೊಬೈಲ್ ಸಂಖ್ಯೆಯನ್ನು ಯಾವಾಗಲೂ ಆಧಾರ್ನಲ್ಲಿ ನವೀಕರಿಸಿ. ನಿಮ್ಮ ಸರಿಯಾದ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಆಧಾರ್ನೊಂದಿಗೆ ಲಿಂಕ್ ಮಾಡಲಾಗಿದೆಯೇ ಎಂಬುದರ ಕುರಿತು ನಿಮಗೆ ಯಾವುದೇ ಸಂದೇಹವಿದ್ದರೆ, ನೀವು ಈ ಲಿಂಕ್ ಅನ್ನು ಬಳಸಿಕೊಂಡು ಅದನ್ನು ಪರಿಶೀಲಿಸಬಹುದು” ಎಂದು ಅದು ಟ್ವೀಟ್ನಲ್ಲಿ ತಿಳಿಸಿದೆ.
ಆಧಾರ್ ಕಾರ್ಡ್ದಾರರಿಗೆ ಮೊಬೈಲ್ ಸಂಖ್ಯೆ ಅಥವಾ ಆಧಾರ್ನೊಂದಿಗೆ ಲಿಂಕ್ ಮಾಡಲಾದ ಇ-ಮೇಲ್ ವಿಳಾಸದ ಬಗ್ಗೆ ಸಂದೇಹವಿದ್ದರೆ, ಅವರು ಪರಿಶೀಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು:
ಮೊದಲು, ನೀವು ಯುಎಡಿಎಐಎ ವೆಬ್ಸೈಟ್ನಲ್ಲಿ myaadhaar.uidai.gov.in/verify-email-mobile ಗೆ ಲಾಗ್ ಇನ್ ಆಗಬೇಕು.
ಅಲ್ಲಿ ‘ವೆರಿಫೈ ಮೊಬೈಲ್ ನಂಬರ್’ ಮತ್ತು ‘ವೆರಿಫೈ ಇಮೇಲ್ ಅಡ್ರೆಸ್’ ಎಂಬ ಎರಡು ಆಯ್ಕೆಗಳಿರುತ್ತವೆ.
ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಎರಡು ಆಯ್ಕೆಗಳಲ್ಲಿ ಒಂದನ್ನು ಆರಿಸಿ. ಮುಂದಕ್ಕೆ ಹೋಗಲು ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.
ನಂತರ, ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ವಿಳಾಸವನ್ನು ನಮೂದಿಸಿ. ಅದರ ನಂತರ, ನೀಡಲಾದ ಕ್ಯಾಪ್ಚಾವನ್ನು ನಮೂದಿಸಿ ಮತ್ತು ‘ಸೆಂಡ್ ಒಟಿಪಿ’ ಆಯ್ಕೆಯನ್ನು ಕ್ಲಿಕ್ ಮಾಡಿ.
ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ವಿಳಾಸದಲ್ಲಿ ನೀವು ಒಟಿಪಿಯನ್ನು ಸ್ವೀಕರಿಸಿದರೆ, ನಿಮ್ಮ ಆಧಾರ್ ಸಂಖ್ಯೆಗೆ ಸಂಬಂಧಿಸಿದ ಮಾಹಿತಿಯು ಸರಿಯಾಗಿದೆ ಮತ್ತು ನಿಮ್ಮ ಫೋನ್ ಸಂಖ್ಯೆ ಅಥವಾ ಇಮೇಲ್ ವಿಳಾಸವನ್ನು ಅದಕ್ಕೆ ಲಿಂಕ್ ಮಾಡಲಾಗಿದೆ ಎಂದು ಅರ್ಥಮಾಡಿಕೊಳ್ಳಬಹುದು.