ಮಾನಸಿಕ ಖಿನ್ನತೆ ಕೂಡ ಒಂದು ರೋಗವಿದ್ದಂತೆ. ಇದು ಮನುಷ್ಯನನ್ನು ಅಪಾಯಕ್ಕೆ ದೂಡಬಹುದು. ಬೇರೆಯವರಿಗೆ ಇದೊಂದು ಸಮಸ್ಯೆನೇ ಅಲ್ಲ ಅನಿಸಬಹುದು. ಆದರೆ ಯಾರು ಈ ರೀತಿಯ ಖಿನ್ನತೆ ಅನುಭವಿಸುತ್ತಿದ್ದಾರೋ ಅವರಿಗೆ ಮಾತ್ರ ಅದರ ತೀವ್ರತೆ ಗೊತ್ತಿರುತ್ತದೆ.
ಇತ್ತೀಚೆಗೆ ಆತ್ಮಹತ್ಯೆಗೆ ಶರಣಾದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಕೂಡ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಮಾನಸಿಕ ಖಿನ್ನತೆಯಿಂದ ಅವರು ಆತ್ಮಹತ್ಯೆ ಮಾಡಿಕೊಂಡರು ಎಂಬ ಸುದ್ದಿ ಹರಿದಾಡುತ್ತಿದೆ. ಆತ್ಮಹತ್ಯೆ ಮಾಡಿಕೊಳ್ಳುವವರು ಹೇಡಿಗಳು ಎಂದು ಕೆಲವರು ಹೇಳಬಹುದು. ಆದರೆ ಖಿನ್ನತೆಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಒಮ್ಮೆ ಇದರಿಂದ ಮುಕ್ತಿ ಹೊಂದಿದರೆ ಸಾಕು ಅನಿಸುತ್ತದೆ. ಮನಸ್ಸಿನ ಮೇಲಿನ ಹತೋಟಿ ಕಳೆದುಕೊಂಡು ಅವರು ಜೀವವನ್ನು ಅಪಾಯಕ್ಕೆ ಒಡ್ಡುತ್ತಾರೆ.
ಖಿನ್ನತೆ ಸಮಸ್ಯೆ ಎದುರಿಸುತ್ತಿರುವವರಿಗೆ ಬೇಕಿರುವುದು ಆಪ್ತರ ಒಡನಾಟ. ಹಾಗೇ ಅವರ ನೋವನ್ನು ಕೇಳಿಸಿಕೊಳ್ಳುವವರು. ಹಾಗಾಗಿ ಮನಸ್ಸಿನಲ್ಲಿ ಏನೇ ದುಗುಡವಿದ್ದರೂ ನಿಮಗೆ ಯಾರು ಆಪ್ತರು ಅನಿಸುತ್ತಾರೋ ಅವರ ಬಳಿ ಮನಬಿಚ್ಚಿ ಮಾತನಾಡಿ. ಹಾಗೇ ಈ ಸಮಸ್ಯೆಯಿಂದ ಹೊರಬರುವುದಕ್ಕೆ ಸರಿಯಾದ ದಾರಿ ಯಾವುದು ಎಂದು ಯೋಚಿಸಿ. ಇನ್ನು ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಹೆಚ್ಚೆಚ್ಚು ನಿಮ್ಮನ್ನು ತೊಡಗಿಸಿಕೊಳ್ಳಿ. ಇದರಿಂದ ಈ ಸಮಸ್ಯೆಯಿಂದ ಹೊರಬರಲು ಸಾಧ್ಯವಾಗುತ್ತದೆ.