ಫ್ಯಾನ್ಸಿ ಹಾಗೂ ವಿಐಪಿ ಸಂಖ್ಯೆಗಳು ಇದ್ದ ಕಾರುಗಳು ಎಲ್ಲೇ ಇದ್ದರೂ ಎಲ್ಲರ ಗಮನ ಸೆಳೆಯುತ್ತೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಅಲ್ಲದೇ ಇದರಿಂದ ನಿಮ್ಮ ಕಾರಿಗೂ ಜನಪ್ರಿಯತೆ ಬೇಡವೆಂದರೂ ಹರಿದು ಬರುತ್ತೆ. ಕಾರು ಮಾಲೀಕರು ವಿವಿಧ ಕಾರಣಕ್ಕೆ ಫ್ಯಾನ್ಸಿ ನಂಬರ್ ಆಯ್ಕೆ ಮಾಡಿಕೊಳ್ಳುತ್ತಾರೆ. ಕೆಲವರು ತಮ್ಮ ಜನ್ಮದಿನಾಂಕ, ಇನ್ನೂ ಕೆಲವರು ತಮ್ಮ ಲಕ್ಕಿ ನಂಬರ್ ಹೀಗೆ ನಾನಾ ಕಾರಣಕ್ಕೆ ಫ್ಯಾನ್ಸಿ ನಂಬರ್ಗಳ ಆಯ್ಕೆ ಆಗುತ್ತದೆ.
ನೀವು ಸಹ ಕಾರನ್ನು ಖರೀದಿಸಿ ಅದಕ್ಕೆ ಫ್ಯಾನ್ಸಿ ನಂಬರ್ ಅಥವಾ ವಿಐಪಿ ನಂಬರ್ ಹಾಕಿಸಬೇಕು ಎಂದುಕೊಂಡಿದ್ದರೆ ಅದನ್ನು ಪಡೆಯುವುದು ಹೇಗೆ ಎಂಬುದಕ್ಕೆ ಇಲ್ಲಿ ಹಂತ ಹಂತವಾದ ಮಾಹಿತಿಯನ್ನು ನೀಡಲಾಗಿದೆ.
ಮೊದಲನೆಯದಾಗಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ (MoRTH) ಅಧಿಕೃತ ವೆಬ್‌ಸೈಟ್‌ನಲ್ಲಿ ಸಾರ್ವಜನಿಕ ಬಳಕೆದಾರರಾಗಿ ನಿಮ್ಮನ್ನು ನೋಂದಾಯಿಸಿಕೊಳ್ಳುವುದರೊಂದಿಗೆ ಈ ಕೆಲಸ ಆರಂಭಗೊಳ್ಳುತ್ತೆ. ಯಶಸ್ವಿಯಾಗಿ ಲಾಗಿನ್ ಆದ ನಂತರ, ನೀವು ಬಿಡ್ ಮಾಡಲು ಬಯಸುವ ಫ್ಯಾನ್ಸಿ ಸಂಖ್ಯೆಯನ್ನು ಆಯ್ಕೆಮಾಡಿ.
ನೋಂದಣಿ ಮತ್ತು ಬುಕ್ಕಿಂಗ್ ಗೆ ಅಗತ್ಯವಿರುವ ಶುಲ್ಕವನ್ನು ಪಾವತಿಸಿ. ನೋಂದಣಿ ಶುಲ್ಕವು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರಬಹುದು. ಉದಾಹರಣೆಗೆ ದೆಹಲಿಯಲ್ಲಿ ಇದು 1,000 ರೂ. ಮೊತ್ತವನ್ನು ಹೊಂದಿದೆ. ನೆನಪಿರಲಿ ಈ ಮೊತ್ತವನ್ನು ಮರುಪಾವತಿಸಲಾಗುವುದಿಲ್ಲ.
ನೋಂದಣಿ ಮಾಡಿದ ನಂತರ, ಮುಂದಿನ ಹಂತವು ಸಂಖ್ಯೆಗಾಗಿ ಬಿಡ್ ಮಾಡುವುದು. ಬಿಡ್ಡಿಂಗ್ ಪ್ರಕ್ರಿಯೆಯನ್ನು ಸಾಮಾನ್ಯವಾಗಿ ಆನ್‌ಲೈನ್‌ನಲ್ಲಿ ನಡೆಸಲಾಗುತ್ತದೆ ಮತ್ತು ಅತಿ ಹೆಚ್ಚು ಬಿಡ್ ಮಾಡಿದವರು ಸಂಖ್ಯೆಯನ್ನು ಗೆಲ್ಲುತ್ತಾರೆ. ಒಮ್ಮೆ ನೀವು ಬಿಡ್ ಗೆದ್ದ ನಂತರ, ನೀವು ಅಂತಿಮ ಮೊತ್ತವನ್ನು ಪಾವತಿಸಬೇಕು ಮತ್ತು ನಿಮ್ಮ ವಾಹನಕ್ಕೆ ನಿಗದಿಪಡಿಸಿದ ಸಂಖ್ಯೆಯನ್ನು ಪಡೆಯಬೇಕು.