ಮಳೆಗಾಲವು ಆಹ್ಲಾದಕರವಾಗಿರುತ್ತದೆ. ಮಳೆಗಾಲ ಮುಗಿದರೂ ಡೆಂಗ್ಯೂ ಸೇರಿದಂತೆ ಅನೇಕ ರೋಗಗಳ ಅಪಾಯ ಇದ್ದೇ ಇರುತ್ತದೆ. ಮಳೆಗಾಲದಲ್ಲಿ ಡೆಂಗ್ಯೂ ಅಪಾಯ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಡೆಂಗ್ಯೂ ಜ್ವರ ಕಾಣಿಸಿಕೊಳ್ಳೋದು ಸೊಳ್ಳೆ ಕಡಿತದಿಂದ. ಡೆಂಗ್ಯೂ ಜ್ವರ ವ್ಯಕ್ತಿಯನ್ನು ಸಂಪೂರ್ಣವಾಗಿ ದುರ್ಬಲಗೊಳಿಸುತ್ತದೆ. ಕೆಲವೊಮ್ಮೆ ಮಾರಣಾಂತಿಕವೂ ಆಗಬಹುದು.
ಕೆಲವೊಂದು ಟಿಪ್ಸ್ ಫಾಲೋ ಮಾಡಿದ್ರೆ ಅಪಾಯಕಾರಿ ಸೊಳ್ಳೆ ಕಡಿತವನ್ನು ತಪ್ಪಿಸಿಕೊಳ್ಳಬಹುದು. ಡೆಂಗ್ಯೂವಿನಂತಹ ಮಾರಕ ಕಾಯಿಲೆಗಳಿಂದಲೂ ದೂರವಿರಬಹುದು.
ನೀವು ಡೆಂಗ್ಯೂ ಜ್ವರದಿಂದ ತಪ್ಪಿಸಿಕೊಳ್ಳಲು ಬಯಸಿದರೆ ಮೊದಲು ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಬೇಕು. ಇದಕ್ಕಾಗಿ ಮನೆಯಿಂದ ಹೊರಹೋಗುವಾಗ ಎರಡೂ ಕೈ ಮತ್ತು ಪಾದಗಳನ್ನು ಸಂಪೂರ್ಣ ಮುಚ್ಚಿಕೊಳ್ಳಿ. ನೀವು ತೋಳಿಲ್ಲದ ಬಟ್ಟೆಗಳನ್ನು ಧರಿಸಲು ಬಯಸಿದರೆ, ಸೊಳ್ಳೆ ಕಡಿತವನ್ನು ತಪ್ಪಿಸಲು ಲೋಶನ್‌ಗಳನ್ನು ಸವರಿಕೊಳ್ಳಿ. ಇದಲ್ಲದೇ ಮಲಗುವಾಗ ಸೊಳ್ಳೆ ಪರದೆ ಬಳಸಿ.
ಮಳೆಗಾಲದಲ್ಲಿ ಡೆಂಗ್ಯೂ ಹರಡುವ ಸಾಧ್ಯತೆ ಹೆಚ್ಚು, ಅದಕ್ಕಾಗಿಯೇ ಈ ಅವಧಿಯಲ್ಲಿ ನೀವು ಮನೆಯ ಕಿಟಕಿ ಬಾಗಿಲುಗಳನ್ನು ಮುಚ್ಚುವುದು ಮುಖ್ಯ. ಹೀಗೆ ಮಾಡುವುದರಿಂದ ಸೊಳ್ಳೆಗಳು ಮನೆಯೊಳಗೆ ಬರದಂತೆ ತಡೆಯಬಹುದು.
ಕೊಳೆ ಇದ್ದಲ್ಲಿ ಸೊಳ್ಳೆಗಳು ಹೆಚ್ಚು ಸಂತಾನೋತ್ಪತ್ತಿ ಮಾಡುತ್ತವೆ. ಮಳೆಯ ನೀರು ಸಂಗ್ರಹವಾದಾಗ ಅಂತಹ ಸ್ಥಳಗಳಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಹಾಗಾಗಿ ಮನೆಯ ಸುತ್ತ ಮುತ್ತ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಿ. ಎಲ್ಲೆಂದರಲ್ಲಿ ಕಸ ಶೇಖರಣೆಯಾಗದಂತೆ ಜಾಗೃತೆ ವಹಿಸಿ. ಮನೆಯನ್ನು ಆದಷ್ಟು ಸ್ವಚ್ಛವಾಗಿರಿಸಿ.