
ಕೆಲವೊಮ್ಮೆ ಪರಿಸ್ಥಿತಿ, ಇತರರ ನಡವಳಿಕೆಯಿಂದ ವಿಪರೀತ ಕೋಪ ಬಂದು ನಡೆಯಬಾರದ ಘಟನೆ ನಡೆದು ಹೋಗುತ್ತದೆ. ನಮ್ಮ ಕೋಪವನ್ನು ಹತೋಟಿಗೆ ತೆಗೆದುಕೊಳ್ಳದಿದ್ದರೆ ಸುಮ್ಮನೆ ನಮ್ಮ ಮನಸ್ಸು ಹಾಳು, ಸಂಬಂಧವೂ ಹಾಳಾಗುವ ಸಾಧ್ಯತೆ ಇರುತ್ತದೆ.
ಕೋಪ ಬಂದಾಗ ಹೇಗೆ ಕಂಟ್ರೋಲ್ ಮಾಡಬೇಕು ಎಂಬುದನ್ನು ನಾವು ತಿಳಿದುಕೊಂಡಿರಬೇಕು. ಆ ಕ್ಷಣಕ್ಕೆ ವ್ಯಕ್ತಿ ಆಡಿದ ಮಾತಿಗೆ ಕೋಪಗೊಂಡು ತಾಳ್ಮೆ ಕಳೆದುಕೊಳ್ಳುವ ಬದಲು ಮಾತಿಗೆ ಮಾತು ಸೇರಿಸದೇ ಸುಮ್ಮನಾಗುವುದು ಒಳ್ಳೆಯದು. ನಮ್ಮ ಸಿಟ್ಟು ತಣಿದ ಮೇಲೆ ಯೋಚಿಸಿದಾಗ ಮನಸ್ಸು ಶಾಂತವಾಗಿರುತ್ತದೆ. ಜಗಳವೂ ಆಗುವುದಿಲ್ಲ.
ಯಾರಾದರೂ ನಿಮ್ಮ ಜತೆ ಜಗಳಕ್ಕೆ ಬಂದರೆ ಆದಷ್ಟು ಆ ಪರಿಸ್ಥಿತಿಗಳನ್ನು ಸುಧಾರಿಸುವುದು ನೋಡಿ. ಇಲ್ಲದಿದ್ದರೆ ಅವರಿಗೆ ಇನ್ನೊಮ್ಮೆ ಮಾತನಾಡೋಣ ಎಂದು ಹೇಳಿ ಸುಮ್ಮನಾಗಿ ಬಿಡಿ. ನಿಮ್ಮ ಮೌನ ಕೂಡ ಕೆಲವೊಮ್ಮೆ ಜಗಳವನ್ನು ತಡೆಯುವಲ್ಲಿ ಸಹಾಯಕವಾಗುತ್ತದೆ.
ತುಂಬಾ ಕೋಪ ಬಂದಾಗ 10 ರಿಂದ 1ರವರೆಗೆ ಮನಸ್ಸಿನಲ್ಲಿ ನಂಬರ್ ಗಳನ್ನು ಎಣಿಸಿ. ಇಲ್ಲದಿದ್ದರೆ ಕಣ್ಣುಮುಚ್ಚಿ ಜೋರಾಗಿ ಉಸಿರು ಎಳೆದುಕೊಳ್ಳಿ. ಆಗ ಕೋಪ ಸ್ವಲ್ಪ ಮಟ್ಟಿಗೆ ತಹಬಂದಿಗೆ ಬರುತ್ತದೆ.