ಮರದ ಸ್ಪೂನ್‌ಗಳು ಅಡುಗೆ ಮನೆಯ ಉಪಯುಕ್ತ ಹಾಗೂ ಸುಂದರ ಸಾಧನಗಳಾಗಿವೆ. ಅವುಗಳನ್ನು ಸರಿಯಾಗಿ ಸ್ವಚ್ಚಗೊಳಿಸಿದರೆ ಅವುಗಳಲ್ಲಿ ಬ್ಯಾಕ್ಟೀರಿಯಾ ಸಂಗ್ರಹವಾಗುವುದನ್ನು ತಡೆಯಬಹುದು ಹಾಗೂ ಬಹುಕಾಲದವರೆಗೂ ಬಾಳಿಕೆ ಬರುವಂತೆ ನೋಡಿಕೊಳ್ಳಬಹುದು. ಅದು ಹೇಗೆ ಅಂದರೆ….
* ಮರದ ಸ್ಪೂನ್‌ಗಳನ್ನು ಬಳಸಿದ ನಂತರ ಅವುಗಳನ್ನು ಬೆಚ್ಚಗಿನ ನೀರಿನಲ್ಲಿ ಹಾಕಬೇಕು. ತಕ್ಷಣ ಕೈಯಿಂದ ಉಜ್ಜಿ ತೊಳೆದು ಬಿಡಬೇಕು. ಬಹು ಸಮಯ ನೀರಲ್ಲಿ ನೆನೆಸಿಡಬಾರದು. ಇದರಿಂದ ಸ್ಪೂನ್ ಬಿರುಕು ಬಿಟ್ಟು ಹಾಳಾಗುವ ಸಾಧ್ಯತೆ ಹೆಚ್ಚು.
* ಮರದ ಚಮಚಗಳನ್ನು ದಿನ ನಿತ್ಯ ಬಳಸುವ ಪಾತ್ರೆ ತೊಳೆಯುವ ಸೋಪು ಅಥವಾ ಲಿಕ್ವಿಡ್ ಹಾಕಿ ಕೈಗಳಿಂದ ಅಥವಾ ಮೃದುವಾದ ಸ್ಪಾಂಜ್‌ನಿಂದ ಉಜ್ಜಿ ತೊಳೆಯಬೇಕು.
* ಮರದ ಸಾಮಾನುಗಳನ್ನು ಡಿಶ್‌ವಾಶರ್‌ನಲ್ಲಿ ತೊಳೆಯಬಾರದು. ಇದರಿಂದ ಅವು ಬೇಗ ಹಾಳಾಗುತ್ತವೆ.
* ಸ್ವಚ್ಛವಾಗಿ ತೊಳೆದ ಮರದ ಸ್ಪೂನ್‌ಗಳನ್ನು ಬಿಸಿಲಿಗೆ ಒಣಗಲು ಹಾಕಬಾರದು. ಇದರಿಂದ ಅವು ಬಿರುಕು ಬಿಡುತ್ತವೆ. ಹಾಗಾಗಿ ಕಿಚನ್ ಟವಲ್‌ನಿಂದ ತೇವಾಂಶವನ್ನು ಒರೆಸಿ ಎತ್ತಿಟ್ಟರೆ ಒಳಿತು.
* ಮರದ ಚಮಚಗಳಲ್ಲಿ ಗಟ್ಟಿಯಾದ ಜಿಡ್ಡು, ಕಲೆಯಾಗಿದ್ದರೆ ಅದನ್ನು ತೆಗೆಯಲು ಅಡುಗೆ ಸೋಡಾ, ನಿಂಬೆ ರಸ ಅಥವಾ ವಿನೆಗರ್ ಬಳಸಿ ಬೆಚ್ಚಗಿನ ನೀರಿನಿಂದ ತೊಳೆಯಬಹುದು. ಚಮಚಗಳನ್ನು ತೊಳೆಯಲು ಬಳಸುವ ಅಡುಗೆ ಸೋಡಾ, ಬ್ಲೀಚ್, ವಿನೆಗರ್ ಇತ್ಯಾದಿ ರಾಸಾಯನಿಕಗಳನ್ನು ಬಳಸುವ ಮೊದಲು ಕೈಗಳಿಗೆ ಗ್ಲೌಸ್ ಹಾಕಿಕೊಳ್ಳಬೇಕು.