ಕೊರೊನಾ ನಿಯಂತ್ರಣಕ್ಕೆ ದೇಶದಲ್ಲಿ ಲಸಿಕೆ ಅಭಿಯಾನ ನಡೆಯುತ್ತಿದೆ. ನಮ್ಮ ಸುತ್ತಮುತ್ತಲು ಅನೇಕ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗ್ತಿದೆ. ಈ ಮಧ್ಯೆ ನಕಲಿ ಲಸಿಕೆ ಸಮಸ್ಯೆ ಎದುರಾಗಿದೆ. ಕೆಲ ರಾಜ್ಯಗಳಲ್ಲಿ ನಕಲಿ ಲಸಿಕೆ ನೀಡಲಾಗ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಲಸಿಕೆ ಬಗ್ಗೆ ನೀವು ಕೆಲವೊಂದು ವಿಷ್ಯಗಳನ್ನು ತಿಳಿದಿರಬೇಕಾಗುತ್ತದೆ.
ಯಾವುದೇ ಸೊಸೈಟಿ ಅಥವಾ ಕಾಲೋನಿಯಲ್ಲಿ ಲಸಿಕೆ ಕ್ಯಾಂಪ್ ನಡೆಯುತ್ತಿದ್ದರೆ ಮೊದಲು ಅದ್ರ ಬಗ್ಗೆ ಸರಿಯಾಗಿ ವಿಚಾರಿಸಿ. ಸ್ಥಳೀಯ ಅಧಿಕಾರಿಗಳು, ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿ. ಅವರಿಂದ ಸರಿಯಾದ ಮಾಹಿತಿ ಸಿಕ್ಕಿದರೆ ಮಾತ್ರ ಲಸಿಕೆ ಹಾಕಿಸಿಕೊಳ್ಳಿ, ಆಸ್ಪತ್ರೆ ಜೊತೆ ಒಪ್ಪಂದ ಮಾಡಿಕೊಂಡು ಸಂಸ್ಥೆಗಳು ಕ್ಯಾಂಪ್ ನಡೆಸುತ್ತಿದ್ದರೆ ಇದ್ರ ಬಗ್ಗೆಯೂ ಸರಿಯಾಗಿ ತಿಳಿದುಕೊಳ್ಳಿ.
ವ್ಯಾಕ್ಸಿನ್ ಪೋರ್ಟಲ್ ನಲ್ಲಿ ಹೆಸರು ನೋಂದಾವಣಿಯಾಗಿರುವ ಆಸ್ಪತ್ರೆಯಲ್ಲಿ ಮಾತ್ರ ಲಸಿಕೆ ಪಡೆಯಿರಿ. ಅಪ್ಲಿಕೇಷನ್ ನಲ್ಲಿ ಆಸ್ಪತ್ರೆ ಹೆಸರಿಲ್ಲದೆ ಹೋದಲ್ಲಿ ಅಲ್ಲಿ ಲಸಿಕೆ ಹಾಕಿಸಿಕೊಳ್ಳಬೇಡಿ. ಹಾಗೆ ಲಸಿಕೆ ಹಾಕಿದ ತಕ್ಷಣ ನೀವು ಸರ್ಟಿಫಿಕೆಟ್ ಕೇಳಿ ಪಡೆಯಬೇಕು. ಒಂದು ವೇಳೆ ಲಸಿಕೆ ಹಾಕಿದ ಪ್ರಮಾಣಪತ್ರ ನೀಡಲು ಆಸ್ಪತ್ರೆ ಹಿಂದೇಟು ಹಾಕಿದ್ರೆ ಅಥವಾ ವಿಳಂಬದ ಬಗ್ಗೆ ಮಾತನಾಡಿದ್ರೆ ಎಚ್ಚರ ವಹಿಸಿ.
ಕೊರೊನಾ ಲಸಿಕೆ ಎಲ್ಲರಿಗೂ ಜ್ವರ, ನೆಗಡಿ ತರುವುದಿಲ್ಲ. ಆದ್ರೆ ಕೇಂದ್ರದಲ್ಲಿ ನಿಮ್ಮ ಜೊತೆ ಲಸಿಕೆ ಹಾಕಿದ ಯಾರೊಬ್ಬರಿಗೂ ಜ್ವರ, ನೋವು ಕಾಣಿಸದೆ ಹೋದಲ್ಲಿ ಅದು ನಕಲಿ ಎಂದರ್ಥ. ಹಾಗಾಗಿ ನಿಮ್ಮ ಜೊತೆ ಲಸಿಕೆ ಹಾಕಿಸಿಕೊಂಡವರನ್ನು ವಿಚಾರಿಸಿ.