ಬೆಂಗಳೂರು : ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯ ಸರ್ಕಾರ ಮನೆ ಯಜಮಾನಿಗೆ ಎರಡು ಸಾವಿರ ರೂಪಾಯಿ ನೀಡಲಿದ್ದು, ಇದಕ್ಕಾಗಿ ಪಡಿತರ ಚೀಟಿಯಲ್ಲಿ ಮಹಿಳೆಯರು ಮನೆಯ ಯಜಮಾನಿ ಎಂದಿರಬೇಕು. ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆಗೆ ಕೂಡ ಆರಂಭವಾಗಿದೆ.
ಪಡಿತರ ಚೀಟಿಯಲ್ಲಿ ಮನೆ ಯಜಮಾನಿ ಬದಲಾವಣೆಗೆ ಅವಕಾಶ ಕಲ್ಪಿಸಲಾಗಿದೆ. ರಾಜ್ಯದಲ್ಲಿ 1.53 ಕೋಟಿ ಮಂದಿ ಪಡಿತರ ಚೀಟಿ ಹೊಂದಿದ್ದಾರೆ. ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಪಡಿತರ ಚೀಟಿಯಲ್ಲಿ ಮಹಿಳೆ ಮುಖ್ಯಸ್ಥೆ ಆಗಿರಬೇಕು. 1.22 ಕೋಟಿ ಪಡಿತರ ಚೀಟಿಯಲ್ಲಿ ಮಾತ್ರ ಮಹಿಳಾ ಮುಖ್ಯಸ್ಥರು ಎಂದಿದ್ದು, ಇವರು ಯೋಜನೆಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ. ಉಳಿದ ಪಡಿತರ ಚೀಟಿಗಳಲ್ಲಿ ಪುರುಷರು ಮುಖ್ಯಸ್ಥರಾಗಿರುವುದರಿಂದ ಪಡಿತರ ಚೀಟಿಯಲ್ಲಿ ಯಜಮಾನಿ ಎಂದು ನಮೂದಿಸಲು ಅವಕಾಶ ನೀಡಲಾಗಿದೆ.
ಯಜಮಾನಿ’ ಹೆಸರು ಬದಲಿಸಬೇಕೆ? ಈ ರೀತಿ ಮಾಡಿ ಸಾಕು!
ಸಮೀಪದ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಮುಖ್ಯಸ್ಥರ ಹೆಸರು ಬದಲಾವಣೆ ಅರ್ಜಿ ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು. ಬಯೋಮೆಟ್ರಿಕ್ ದೃಢೀಕರಣ ಮೂಲಕ ದಾಖಲೆಗಳನ್ನು ದೃಢೀಕರಿಸಿ ಸೇವಾ ಕೇಂದ್ರದಲ್ಲಿ ಮಾಹಿತಿಯನ್ನು ಆನ್ಲೈನ್ ಮೂಲಕ ಅಪ್ಲೋಡ್ ಮಾಡಿ ಸ್ವೀಕೃತಿ ಪಡೆಯಬೇಕು. ಆಹಾರ ಇಲಾಖೆ ಕಚೇರಿಯಿಂದ ಎಸ್ಎಂಎಸ್ ಬರಲಿದ್ದು, ಬಳಿಕ ಸ್ವೀಕೃತಿ ಪತ್ರ ನೀಡಿ ಮನೆಯ ಯಜಮಾನಿ ಹೆಸರು ಬದಲಿಸಿದ, ಸೇರ್ಪಡೆ ಮಾಡಿದ ಪಡಿತರ ಚೀಟಿ ಪಡೆಯಬಹುದು.
ಆನ್ಲೈನ್ ನಲ್ಲಿ ಪಡಿತರ ಚೀಟಿ ತಿದ್ದುಪಡಿಗಾಗಿ http://ahara.kar.nic.in/ ವೆಬ್ಸೈಟ್ ಗಮನಿಸಬಹುದು. ಇ- ಸೇವೆಗಳ ಮೇಲೆ ಕ್ಲಿಕ್ ಮಾಡಿ, ತಿದ್ದುಪಡಿ/ ಹೊಸ ಸೇರ್ಪಡೆ ಆಯ್ಕೆ ಕ್ಲಿಕ್ ಮಾಡಿ, ಜಿಲ್ಲೆ ಆಯ್ಕೆ ಮಾಡಿ, ಅಗತ್ಯ ಮಾಹಿತಿ ಭರ್ತಿ ಮಾಡಿ ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿ ಅಪ್ಲೋಡ್ ಮಾಡಿದ ನಂತರ ಫಾರ್ಮ್ ಸಬ್ಮಿಟ್ ಕೊಡಿ. ಅರ್ಜಿ ಸಲ್ಲಿಕೆಯ ರಿಜಿಸ್ಟರ್ ನಂಬರ್ ಸಿಗಲಿದೆ. ಈ ನಂಬರ್ ಮೂಲಕ ಅರ್ಜಿಯ ಸ್ಟೇಟಸ್ ಟ್ರ್ಯಾಕ್ ಮಾಡಬಹುದಾಗಿದೆ.
ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರ ಹೆಸರು ಬದಲಾವಣೆ ಮಾಡಲು ಕುಟುಂಬದ ಮುಖ್ಯಸ್ಥರು ಮರಣ ಹೊಂದಿದ್ದರೆ ಅವರ ಮರಣ ಪ್ರಮಾಣ ಪತ್ರ, ಪಡಿತರ ಚೀಟಿ, ಅರ್ಜಿದಾರರ ವಿಳಾಸದ ಪುರಾವೆಗೆ ಆಧಾರ್ ಕಾರ್ಡ್ ಅಥವಾ ಇತರೆ ದಾಖಲೆ, ಅರ್ಜಿದಾರರ ಆಧಾರ್ ಕಾರ್ಡ್ ಅಥವಾ ಇತರೆ ದಾಖಲೆ, ಹೊಸ ಕುಟುಂಬ ಸದಸ್ಯರ ಪಾಸ್ಪೋರ್ಟ್ ಅಳತೆಯ ಫೋಟೋ ಆಧಾರ್ ಕಾರ್ಡ್ ಬೇಕಾಗುತ್ತದೆ ಎಂದು ಹೇಳಲಾಗಿದೆ.