ಟೀ ಪ್ರೇಮಿಗಳ ಅಚ್ಚುಮೆಚ್ಚಿನ ಬಿಸ್ಕತ್ ಪಾರ್ಲೆಜಿ ಅಂದ್ರೆ ತಪ್ಪಾಗೋದಿಲ್ಲ. ಟೀನಲ್ಲಿ ಪಾರ್ಲೆಜಿ ಅದ್ದಿ ತಿನ್ನುತ್ತಿದ್ದರೆ ಟೀ ಹಾಗೂ ಪಾರ್ಲೆಜಿ ಎಷ್ಟು ಹೊಟ್ಟೆಗೆ ಹೋಯ್ತು ಅನ್ನೋದೆ ನೆನಪಿರೋದಿಲ್ಲ. ಮಾರುಕಟ್ಟೆಗೆ ವೆರೈಟಿ, ವೆರೈಟಿ ಬಿಸ್ಕತ್ ಲಗ್ಗೆ ಇಟ್ಟಿದ್ದರೂ ಪಾರ್ಲೆಜಿ ಬೇಡಿಕೆ ಇನ್ನೂ ಕಡಿಮೆ ಆಗಿಲ್ಲ. ಅನೇಕರ ಸಣ್ಣ ಪರ್ಸ್ ನಲ್ಲಿ ಪಾರ್ಲೆಜಿಯ ಒಂದು ಪ್ಯಾಕೆಟ್ ಇರೋದನ್ನು ನೀವು ನೋಡ್ಬಹುದು. ಪಾರ್ಲೆಜಿಯ ಇತಿಹಾಸ ಸುಮಾರು 100 ವರ್ಷಗಳಷ್ಟು ಹಳೆಯದು.
ಚೀನಾದಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ಬಿಸ್ಕತ್ ಪಾರ್ಲೆಜಿ. ಪಾರ್ಲೆಜಿ ರುಚಿ ಹಾಗೂ ಅದ್ರ ಬೆಲೆ ಅದು ಇಷ್ಟು ವರ್ಷಗಳಿಂದ ಮಾರುಕಟ್ಟೆಯಲ್ಲಿ ರಾಜನಾಗಿ ಮೆರೆಯಲು ಕಾರಣವಾಗಿದೆ. ಪಾರ್ಲೆಜಿ ತನ್ನ ರುಚಿಯನ್ನು ಮೊದಲಿನಂತೆ ಕಾಪಾಡಿಕೊಂಡು ಬಂದಿದೆ. ಅಲ್ಲದೆ ಬೆಲೆಯಲ್ಲಿ ದೊಡ್ಡ ಬದಲಾವಣೆ ಈವರೆಗೂ ಆಗಿಲ್ಲ. ಪಾರ್ಲೆಜಿ ಬೆಲೆ ಮೂವತ್ತು ವರ್ಷಗಳಲ್ಲಿ ಒಂದು ರೂಪಾಯಿ ಹೆಚ್ಚಾಗಿದೆ. ಪಾರ್ಲೆಜಿ ಸಣ್ಣ ಪ್ಯಾಕ್ ಬೆಲೆ 1994 ರಲ್ಲಿ 4 ರೂಪಾಯಿ ಇತ್ತು. 2024 ರಲ್ಲಿ ನಮಗೆ 5 ರೂಪಾಯಿಗೆ ಪಾರ್ಲೆಜಿ ಲಭ್ಯವಿದೆ.
ಕಂಪನಿ ಕೇವಲ ಒಂದು ರೂಪಾಯಿ ಏರಿಕೆ ಮಾಡಿದ್ರೆ ಅಂದ್ರೆ ಅದು ನಷ್ಟದಲ್ಲಿದೆ ಎಂದುಕೊಳ್ಳುವವರೇ ಹೆಚ್ಚು. ನಷ್ಟದಲ್ಲಿರುವ ಕಂಪನಿಗಳು ಒಂದೆರಡು ವರ್ಷ ಬೆಲೆ ಇಳಿಕೆ ಮಾಡಿ ಮಾರಾಟ ಮಾಡಬಹುದು. ಮುಂದೆ ಸಾಧ್ಯವಾಗೋದಿಲ್ಲ. ಪಾರ್ಲೆಜಿ ಮೂವತ್ತು ವರ್ಷದಿಂದ ಒಂದೇ ಬೆಲೆಯಲ್ಲಿದೆ ಅಂದ್ರೆ ಅದಕ್ಕೆ ಪಾರ್ಲೆಜಿ ಬೇರೆ ಟೆಕ್ನಿಕ್ ಬಳಕೆ ಮಾಡಿದೆ. ಜನರು ತಮ್ಮ ಕೈಗೆ ಹೊಂದಿಕೊಳ್ಳುವ ಪ್ಯಾಕೆಟ್ ಬಯಸ್ತಾರೆ. ಪಾರ್ಲೆಜಿ ಇದನ್ನು ಬಂಡವಾಳ ಮಾಡಿಕೊಂಡಿದೆ. ಅದು ನಿಧಾನಕ್ಕೆ ಪ್ಯಾಕೆಟ್ ಗಾತ್ರ ಚಿಕ್ಕದು ಮಾಡಿ, ಬಿಸ್ಕತ್ ಸಂಖ್ಯೆ ಕಡಿಮೆ ಮಾಡಿದೆಯೇ ವಿನಃ ಬೆಲೆಯನ್ನು ಹೆಚ್ಚು ಕಡಿಮೆ ಮಾಡಿಲ್ಲ. ಮೊದಲು ಪಾರ್ಲೆ ಜಿ ಸಣ್ಣ ಪ್ಯಾಕ್ 100 ಗ್ರಾಂ ಇತ್ತು. ನಂತ್ರ 92 ಗ್ರಾಂಗೆ ಇಳಿಸಲಾಯ್ತು. ನಂತ್ರ 88 ಗ್ರಾಂಗೆ ಇಳಿತು. ಈಗ ತೂಕವು 45 ಪ್ರತಿಶತದಷ್ಟು ಕಡಿಮೆಯಾಗಿದೆ.