ಎಷ್ಟು ಸಾಧ್ಯವೋ ಅಷ್ಟು ನೀರು ಕುಡಿಯತ್ತಲೇ ಇರಿ ಎಂದು ಹೇಳುವುದನ್ನು ನಾವು ಬಹಳಷ್ಟು ಬಾರಿ ಕೇಳುತ್ತಲೇ ಇರುತ್ತೇವೆ. ಜಿಮ್, ಯೋಗಾ ಕ್ಲಾಸ್ ಅಥವಾ ಯಾವುದೇ ಜಾಗವಿರಲಿ ಫಿಟ್ನೆಸ್ ತಜ್ಞರಲ್ಲಿ ಎಲ್ಲರೂ ಹೇಳುವುದು ನೀರು ಕುಡಿಯುತ್ತಿರಿ ಎಂದು.
ಯಾವಾಗ ಎಷ್ಟೆಷ್ಟು ನೀರು ಕುಡಿಯಬೇಕೆಂದು ನಮಗೆ ತಿಳಿಸಲೆಂದೇ ಬಹಳಷ್ಟು ಅಪ್ಲಿಕೇಶನ್ಗಳೂ ಬಂದಿವೆ. ವ್ಯಾಯಾಮ ಮಾಡುವ ವೇಳೆ ದೇಹಕ್ಕೆ ನೀರು ಅತ್ಯಗತ್ಯವಾದರೂ ಸಹ ಯಾವಾಗ ಎಷ್ಟು ಕುಡಿಯಬೇಕೆಂಬುದು ಬಹಳಷ್ಟು ಮಂದಿಗೆ ಸ್ಪಷ್ಟವಿರುವುದಿಲ್ಲ.
“ಬಹಳ ಕಡಿಮೆ ನೀರು ಕುಡಿದರೆ ನಿಮಗೆ ನಿರ್ಜಲೀಕರಣ ಬಾಧಿಸಬಹುದು. ಹೀಗಾದಲ್ಲಿ ವ್ಯಾಯಾಮದಿಂದ ಸೋಡಿಯಂ ಮಟ್ಟ ಕುಸಿಯುವ ಸಾಧ್ಯತೆ ಇರುತ್ತದೆ. ಹಾಗೇ ತೀರಾ ಹೆಚ್ಚಾಗಿ ನೀರು ಕುಡಿದರೆ ಹೈಪೋನಾಟರ್ಮಿಯಾ ಕಾಡುತ್ತದೆ” ಎನ್ನುತ್ತಾರೆ ಮೆಯೋ ಕ್ಲಿನಿಕ್ನ ಫಿಸಿಷಿಯನ್ ಡಾ. ಸಾರಾ ಫಿಲ್ಮಾಲ್ಟರ್. ಹೀಗಾಗಿ ದಾಹ ತಣಿಸಲು ಎಷ್ಟು ಬೇಕೋ ಅಷ್ಟು ನೀರು ಕುಡಿಯುವುದು ಉತ್ತಮ ಎಂದು ಸಾರಾ ತಿಳಿಸಿದ್ದಾರೆ.
“ದೇಹಕ್ಕೆ ಅಗತ್ಯವಾದ ದ್ರವದ ಅರ್ಧದಷ್ಟನ್ನು ನೀರಿನಲ್ಲಿ ಹಾಗೂ ಇನ್ನರ್ಧವನ್ನು ಎಲೆಕ್ಟ್ರೋಲೈಟ್ಗಳಿಂದ ತುಂಬಿರುವ ಸಕ್ಕರೆಭರಿತ ಪೇಯಗಳ ಮೂಲಕ ತಣಿಸಿಕೊಳ್ಳಬೇಕು,” ಎನ್ನುವ ಸಾರಾ, “ನೀರು ಅಥವಾ ಎಲೆಕ್ಟ್ರೋಲೈಟ್ ಬಳಸಿ ಪುನರ್ಜಲೀಕರಣ ಮಾಡುವ ಉದ್ದೇಶವೆಂದರೆ ನಿಮ್ಮ ದೇಹದ ವ್ಯವಸ್ಥೆಯೊಳಗೆ ದ್ರವವನ್ನು ಮರುತುಂಬಿಸಿ ನಿಮ್ಮ ಅಂಗಾಂಗಗಳನ್ನು ಸಂತುಷ್ಟಗೊಳಿಸುವುದು,” ಎಂದು ತಿಳಿಸಿದ್ದಾರೆ.
ಯಾವುದೇ ಇಬ್ಬರು ವ್ಯಕ್ತಿಗಳಿಗೆ ಒಂದೇ ಪ್ರಮಾಣದ ನೀರು ಬೇಕೆಂದು ಹೇಳಲು ಸಾಧ್ಯವಿಲ್ಲದ ಕಾರಣ ಎಷ್ಟು ನೀರು ಕುಡಿಯಬೇಕೆಂಬುದು ಆಯಾ ವ್ಯಕ್ತಿಯ ಅಗತ್ಯತತೆಯನ್ನು ಅವಲಂಬಿಸಿದೆ.