ಮಾನವನ ದೇಹವು ಬಹುಪಾಲು ನೀರಿನಿಂದ ಮಾಡಲ್ಪಟ್ಟಿದೆ. ಹೀಗಾಗಿ ನೀರನ್ನು ಕುಡಿಯುವುದು ತುಂಬಾ ಮುಖ್ಯವಾಗಿದೆ. ಒಬ್ಬ ಮನುಷ್ಯ ದಿನಕ್ಕೆ ಎಷ್ಟು ನೀರು ಕುಡಿಯಬೇಕು ಎನ್ನುವ ವಿಚಾರದಲ್ಲಿ ಅನೇಕರಿಗೆ ಗೊಂದಲವಿರುತ್ತದೆ. ಸೆಖೆ ಜಾಸ್ತಿ ಇದ್ದಾಗ ಅಥವಾ ವ್ಯಾಯಾಮ ಮಾಡುವಾಗ ನಿರ್ಜಲೀಕರಣಗಳು ಉಂಟಾಗುವ ಸಾಧ್ಯತೆಗಳು ಇರುತ್ತದೆ.
ರಾಷ್ಟ್ರೀಯ ಆರೋಗ್ಯ ಸೇವೆ ನೀಡುವ ಮಾಹಿತಿಯ ಪ್ರಕಾರ, ಸಾಮಾನ್ಯವಾಗಿ ಓರ್ವ ವ್ಯಕ್ತಿಯು ದಿನಕ್ಕೆ ಆರರಿಂದ ಎಂಟು ಗ್ಲಾಸ್ ನೀರು ಸೇವನೆ ಮಾಡಬಹುದು. ಆದರೆ ಅಮೆರಿಕದ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ನೀಡುವ ಮಾಹಿತಿಯ ಪ್ರಕಾರ ಪುರುಷರು ದಿನಕ್ಕೆ 3.7 ಲೀಟರ್ ಹಾಗೂ ಮಹಿಳೆಯರು ದಿನಕ್ಕೆ 2.7 ಲೀಟರ್ ನೀರು ಕುಡಿಯಬೇಕು ಎಂದು ಹೇಳಿದೆ. ನೀರಿನ ಸೇವನೆಯು ಸಾಮಾನ್ಯವಾಗಿ ಕುಡಿಯುವ ನೀರಿನ ಜೊತೆಯಲ್ಲಿ ಇತರೆ ಪಾನೀಯಗಳು ಹಾಗೂ ಹಣ್ಣು, ತರಕಾರಿ ಸೇವನೆಯನ್ನೂ ಒಳಗೊಂಡಿರುತ್ತದೆ.
ಒಬ್ಬ ವ್ಯಕ್ತಿಯು ಪ್ರತಿದಿನ ಕುಡಿಯುವ ನೀರಿನ ಪ್ರಮಾಣವು ಪರಿಸ್ಥಿತಿಗಳ ಮೇಲೆ ಬದಲಾಗುತ್ತದೆ. ಮೆಯೋ ಕ್ಲಿನಿಕ್ ಪ್ರಕಾರ, ವ್ಯಾಯಾಮ ಮಾಡುವವರು ವ್ಯಾಯಾಮ ಮಾಡುವ ಮುನ್ನ, ವ್ಯಾಯಾಮ ಮಾಡುವ ಸಂದರ್ಭದಲ್ಲಿ ಹಾಗೂ ನಂತರ ಹೆಚ್ಚು ನೀರನ್ನು ಕುಡಿಯಬೇಕು. ಏಕೆಂದರೆ ವ್ಯಾಯಾಮ ಮಾಡುವಾಗ ನಮ್ಮ ದೇಹದಿಂದ ಹೆಚ್ಚು ನೀರು ಹೊರಕ್ಕೆ ಹೋಗುತ್ತದೆ. ಈ ಸಂದರ್ಭದಲ್ಲಿ ದೇಹಕ್ಕೆ ನೀರಿನ ಅಗತ್ಯ ಇರುತ್ತದೆ.
ಇನ್ನು ಸೆಖೆ ಹೆಚ್ಚಿರುವ ಪ್ರದೇಶದಲ್ಲಿ ವಾಸಿಸುವವರು ಸಾಮಾನ್ಯಕ್ಕಿಂತ ಹೆಚ್ಚೇ ನೀರನ್ನು ಕುಡಿಯಬೇಕು ಏಕೆಂದರೆ ಈ ಹವಾಮಾನದಲ್ಲಿ ನೀವು ಹೆಚ್ಚು ಬೆವರುತ್ತಿರಿ. ಇದರಿಂದ ದೇಹದಲ್ಲಿ ದ್ರವ ನಷ್ಟ ಉಂಟಾಗುತ್ತದೆ. ಪರ್ವತಗಳಂತಹ ಎತ್ತರ ಪ್ರದೇಶಗಳಲ್ಲಿಯೂ ನಿರ್ಜಲೀಕರಣ ಸಮಸ್ಯೆ ಉಂಟಾಗಬಹುದು.