ನೀವು ವಾಕಿಂಗ್ ಪ್ರಿಯರೇ…? ಬೆಳಗ್ಗೆದ್ದು ನಡೆಯುವುದೆಂದರೆ ನಿಮಗೆ ಬಲು ಇಷ್ಟವೇ…? ಹಾಗಿದ್ದರೆ ದಿನಕ್ಕೆ ಎಷ್ಟು ಹೆಜ್ಜೆ ನಡೆಯುವುದು ಒಳ್ಳೆಯದು ಎಂಬುದು ನಿಮಗೆ ತಿಳಿದಿದೆಯೇ.
ತಜ್ಞರ ಪ್ರಕಾರ ದಿನಕ್ಕೆ 30 ನಿಮಿಷಗಳ ನಡಿಗೆ ಬಹಳ ಒಳ್ಳೆಯದು. 10 ಸಾವಿರ ಹೆಜ್ಜೆ ನಡೆದರೆ ನಿಮ್ಮ ಆರೋಗ್ಯದ ಹಲವು ಸಮಸ್ಯೆಗಳು ನಿಯಂತ್ರಣದಲ್ಲಿವೆ ಎಂದೇ ಅರ್ಥ. ಅಷ್ಟು ಸಾಧ್ಯವಾಗದಿದ್ದರೆ ಕಡೆ ಪಕ್ಷ 5 ಸಾವಿರ ಹೆಜ್ಜೆಗಳನ್ನು ಪೂರೈಸಿ ಎನ್ನುತ್ತಾರೆ ವೈದ್ಯರು.
ಆಧುನಿಕ ಮೊಬೈಲ್ ಗಳಲ್ಲಿ, ವಾಚ್ ಗಳಲ್ಲಿ ನೀವು ಎಷ್ಟು ನಡೆದಿದ್ದೀರಿ ಎಂಬುದನ್ನು ಹೇಳುವ ಟ್ರಾಕರ್ ಗಳಿರುತ್ತವೆ. ಇದನ್ನು ಲೆಕ್ಕ ಹಾಕುವುದು ಈಗ ಸುಲಭ. ಹಾಗಾಗಿ ದಿನಕ್ಕೆ ಇಷ್ಟು ಹೆಜ್ಜೆ ನಡೆಯಲೇಬೇಕೆಂಬ ಗುರಿ ಇಟ್ಟುಕೊಳ್ಳಿ. ಅದರಂತೆ ಪ್ರಯತ್ನಿಸಿ.
ನಿತ್ಯ ನಡೆಯುವುದರಿಂದ ದೇಹ ತೂಕ ಕಡಿಮೆಯಾಗುತ್ತದೆ. ದಿನವಿಡೀ ಉಲ್ಲಾಸದಿಂದ ಇರಲು ಇದು ಸಹಕರಿಸುತ್ತದೆ. ಒತ್ತಡ ದೂರವಾಗುತ್ತದೆ. ಏಕಾಗ್ರತೆ ಲಭ್ಯವಾಗುತ್ತದೆ. ಬೆಳಗಿನ ತಂಗಾಳಿ ನಿಮ್ಮ ಮನಸ್ಸನ್ನು ತಾಜಾ ಆಗಿ ಇರಿಸುತ್ತದೆ. ಹಾಗಿದ್ದರೆ ತಡ ಏಕೆ ಇಂದಿನಿಂದಲೇ ನಿಮ್ಮ ನಡಿಗೆ ಆರಂಭವಾಗಲಿ.