ಸೀಬೆ ಹಣ್ಣನ್ನು ಮಧುಮೇಹಿಗಳು ಸೇರಿದಂತೆ ಪ್ರತಿಯೊಬ್ಬರೂ ಸೇವಿಸಬಹುದು, ಇದರಿಂದ ಅಡ್ಡ ಪರಿಣಾಮಗಳಿಲ್ಲ ಎಂಬುದು ಎಲ್ಲರಿಗೂ ತಿಳಿದ ಸಂಗತಿಯೇ. ಆದರೆ ಈ ಗಿಡದ ಎಲೆ ಹಾಗೂ ಚಿಗುರುಗಳನ್ನು ಸೌಂದರ್ಯ ವರ್ಧಕವಾಗಿಯೂ ಬಳಸಬಹುದು ಎಂಬುದು ನಿಮಗೆ ತಿಳಿದಿದೆಯೇ.
ಸೀಬೆ ಎಲೆ ಅಥವಾ ಪೇರಳೆ ಗಿಡದ ಎಲೆಗಳ ಪೇಸ್ಟ್ ತಯಾರಿಸಿ ಮುಖಕ್ಕೆ ಪ್ಯಾಕ್ ಮಾಡಿಕೊಂಡರೆ ಮೊಡವೆಗಳು ಬರದಂತೆ ತಡೆಗಟ್ಟಬಹುದು. ಇವು ಬ್ಯಾಕ್ಟೀರಿಯಾಗಳನ್ನು ಸಮರ್ಥವಾಗಿ ತೆಗೆದು ಹಾಕುತ್ತವೆ. ಮೊಡವೆಗಳನ್ನು ಕಡಿಮೆ ಮಾಡುತ್ತವೆ ಎಂಬುದು ಅಧ್ಯಯನದಿಂದ ದೃಢಪಟ್ಟಿದೆ.
ಅಲರ್ಜಿ ವಿರೋಧಿ ಗುಣಗಳನ್ನು ಹೊಂದಿರುವ ಸೀಬೆ ಎಲೆಗಳನ್ನು ತುರಿಕೆ ಸಮಸ್ಯೆ ಇರುವವರಿಗೆ ಬಳಸಲು ಸಲಹೆ ಮಾಡಲಾಗುತ್ತದೆ. ದೇಹದ ಅಲ್ಲಲ್ಲಿ ಕೆಂಪಾಗುವುದು ಮತ್ತು ವಿಪರೀತ ಕಿರಿಕಿರಿಯಾಗುವುದನ್ನು ಇದು ಕಡಿಮೆ ಮಾಡುತ್ತದೆ.
ಕೀಟಗಳು ಕಚ್ಚಿ ಅಥವಾ ತುರಿಕೆಯಿಂದಾದ ಕಲೆಗಳನ್ನು ಇದು ದೂರ ಮಾಡುತ್ತದೆ. ಇದನ್ನು ಬಳಸುವಾಗ ಚಿಗುರನ್ನು ನೇರವಾಗಿ ಮಿಕ್ಸಿಯಲ್ಲಿ ರುಬ್ಬಿ ಪೇಸ್ಟ್ ಅನ್ನು ಹಚ್ಚಿಕೊಳ್ಳಬಹುದು. ಇಲ್ಲವೇ ಬಲಿತ ಎಲೆಗಳನ್ನು ಕುದಿಸಿ, ಅ ನೀರನ್ನು ಕಾಟನ್ ಬಟ್ಟೆಯ ನೆರವಿನಿಂದ ಮುಖಕ್ಕೆ ಹಚ್ಚಿಕೊಳ್ಳಿ.
ಹದಿನೈದು ನಿಮಿಷದ ಬಳಿಕ ಮುಖ ತೊಳೆದುಕೊಳ್ಳಿ. ವಾರಕ್ಕೆ ಎರಡು ಬಾರಿ ಇದನ್ನು ಮಾಡಿಕೊಳ್ಳಬಹುದು. ಸ್ನಾನ ಮಾಡುವ ಟಬ್ ಗೆ ನಾಲ್ಕಾರು ಎಲೆಗಳನ್ನು ಹಾಕಿ ಸ್ನಾನ ಮಾಡುವುದರಿಂದ ತುರಿಕೆ ಸಮಸ್ಯೆ ಹತ್ತಿರವೂ ಸುಳಿಯುವುದಿಲ್ಲ.