ಖಾಯಿಲೆಗೆ ತಕ್ಕಂತೆ ಮಾತ್ರೆಗಳನ್ನು ವೈದ್ಯರು ನೀಡ್ತಾರೆ. ಕೆಲ ಖಾಯಿಲೆಗೆ ಆಹಾರಕ್ಕಿಂತ ಮೊದಲೇ ಮಾತ್ರೆ ಸೇವನೆ ಮಾಡಬೇಕಾಗುತ್ತದೆ. ಆಹಾರ ಸೇವನೆಗೆ ಅರ್ಧ ಗಂಟೆ ಮೊದಲು ಮಾತ್ರೆ ಸೇವನೆ ಮಾಡಿ ಎಂದೇ ವೈದ್ಯರು ಹೇಳಿರುತ್ತಾರೆ. ಮತ್ತೆ ಕೆಲ ಮಾತ್ರೆ, ಔಷಧಿಗಳನ್ನು ಆಹಾರದ ನಂತ್ರ ತೆಗೆದುಕೊಳ್ಳಬೇಕಾಗುತ್ತದೆ. ವೈದ್ಯರು ಆಹಾರದ ನಂತ್ರ ಎಂದಷ್ಟೇ ಬರೆದಿರುತ್ತಾರೆ. ಊಟ, ಆಹಾರವಾದ್ಮೇಲೆ ಔಷಧಿ ತೆಗೆದುಕೊಳ್ಳಬೇಕು, ಅದು ಒಂದು ಜವಾಬ್ದಾರಿ ಎಂದು ಭಾವಿಸುವ ಜನರು, ಊಟವಾದ ತಕ್ಷಣ ಮಾತ್ರೆ ತಿನ್ನುತ್ತಾರೆ. ಕೆಲವರು ಊಟದ ಕೈ ತೊಳೆಯುವ ಮೊದಲೇ ಮಾತ್ರೆ ನುಂಗುತ್ತಾರೆ.
ಆಹಾರ ಹಾಗೂ ಮಾತ್ರೆ ಕೆಲಸ ಬೇರೆ ಬೇರೆ. ಆಹಾರ ತನ್ನ ಕೆಲಸ ಮಾಡಬೇಕು, ಮಾತ್ರೆ ತನ್ನ ಕೆಲಸ ಮಾಡಬೇಕು ಎಂದಾದ್ರೆ ನೀವು ಅದನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳಬೇಕು. ಆಹಾರ ಅಥವಾ ಊಟ ಸೇವನೆ ಮಾಡಿದ ತಕ್ಷಣ ಮಾತ್ರೆ – ಔಷಧಿ ನುಂಗಿದ್ರೆ ಅದರಿಂದ ಪ್ರಯೋಜನ ಶೂನ್ಯ. ನೀವು ಮಾತ್ರೆಯನ್ನು ಅಥವಾ ಔಷಧಿಯನ್ನು ಊಟವಾದ ಹತ್ತರಿಂದ ಹದಿನೈದು ನಿಮಿಷಗಳ ನಂತರ ತೆಗೆದುಕೊಳ್ಳಬೇಕು. ಆಗ ಆಹಾರದ ಪೋಷಕಾಂಶ ನಮ್ಮ ದೇಹ ಸೇರುವುದಲ್ಲದೆ, ಮಾತ್ರೆ ತನ್ನ ಕೆಲಸ ಮಾಡಲು ಸಹಾಯವಾಗುತ್ತದೆ.
ಆಹಾರ ಮತ್ತು ಪಾನೀಯದಲ್ಲಿ ಸಾಕಷ್ಟು ಪೋಷಕಾಂಶವಿರುತ್ತದೆ. ನೀವು ಪ್ರತಿ ದಿನ ಮಾತ್ರೆ ತೆಗೆದುಕೊಳ್ಳುವವರಾಗಿದ್ದರೆ ವೈದ್ಯರ ಬಳಿ ಮಾತ್ರೆಯ ಸಮಯವನ್ನು ಸರಿಯಾಗಿ ವಿಚಾರಿಸಿಕೊಳ್ಳಿ. ಹಾಗೆಯೇ ಮಾತ್ರೆ – ಔಷಧಿಗೆ ತಕ್ಕಂತೆ ಯಾವ ಆಹಾರವನ್ನು ತೆಗೆದುಕೊಳ್ಳಬೇಕೆಂಬ ಬಗ್ಗೆ ಚಾರ್ಟ್ ರೆಡಿ ಮಾಡಿ ಡಯಟ್ ಪಾಲನೆ ಮಾಡಿ. ಆಗ ನಿಮ್ಮ ಆರೋಗ್ಯ ಬಹುಬೇಗ ಸುಧಾರಿಸುತ್ತದೆ.