ಭಾರತೀಯ ರೈಲ್ವೇ ತನ್ನ ರೈಲಿನ ಕೋಚ್‌ಗಳ ನಿರ್ವಹಣಾ ಪ್ರದೇಶಗಳಲ್ಲಿ ಬರುವ ಹಳಿಗಳನ್ನೂ ವಿದ್ಯುದೀಕಣಗೊಳಿಸುವ ಮೂಲಕ ಪ್ರತಿನಿತ್ಯ ಎರಡು ಲಕ್ಷ ಲೀಟರ್ ಡೀಸೆಲ್ ಉಳಿತಾಯ ಮಾಡಲು ಉದ್ದೇಶಿಸಿದೆ.
ಮೇಲ್ಕಂಡ ಹಳಿಗಳನ್ನು ಸಾಮಾನ್ಯವಾಗಿ ರೈಲು ನಿಲ್ದಾಣಗಳ ಬಳಿ ಕೋಚ್‌ಗಳ ನಿರ್ವಹಣೆಗೆಂದು ಹಾಕಲಾಗಿದ್ದು, ಇವುಗಳನ್ನು ’ಪಿಟ್ ಲೈನ್‌ಗಳು’ ಎಂದು ಕರೆಯಲಾಗುತ್ತದೆ. ಈ ಪಿಟ್ ಲೈನ್‌ಗಳಿಗೆ ಬರುವ ರೈಲಿನ ಕೋಚ್‌ಗಳಲ್ಲಿ ಎಲೆಕ್ಟ್ರಿಕ್ ಉಪಕರಣಗಳಾದ ದೀಪಗಳು, ಫ್ಯಾನುಗಳು, ಚಾರ್ಜಿಂಗ್ ಪಾಯಿಂಟ್‌ಗಳು ಸೇರಿದಂತೆ ಅನೇಕ ವ್ಯವಸ್ಥೆಗಳ ತಪಾಸಣೆ ಮಾಡಲಾಗುತ್ತದೆ.
2030ರ ವೇಳೆಗೆ ಇಂಗಾಲದ ಹೊರಸೂಸುವಿಕೆಯ ಪ್ರಮಾಣವನ್ನು ಶೂನ್ಯಕ್ಕೆ ತಗ್ಗಿಸುವ ಇರಾದೆಯಲ್ಲಿರುವ ರೈಲ್ವೇ ಈ ಹಾದಿಯಲ್ಲಿ ದೊಡ್ಡ ಹೆಜ್ಜೆಯನ್ನಿಟ್ಟಿದೆ. ದೇಶಾದ್ಯಂತ ಇರುವ 411 ನಿರ್ವಹಣಾ ಪಿಟ್‌ಗಳನ್ನು ಡಿಸೆಂಬರ್ 2023ರ ಒಳಗೆ ವಿದ್ಯುದೀಕರಣಗೊಳಿಸಲು ಭಾರತೀಯ ರೈಲ್ವೇ ಉದ್ದೇಶಿಸಿದೆ. ಇವುಗಳ ಪೈಕಿ ಅದಾಗಲೇ 302 ಪಿಟ್‌ಗಳ ವಿದ್ಯುದೀಕರಣ ಮಾಡಿಯಾಗಿದೆ.
ಸದ್ಯ ಭಾರತೀಯ ರೈಲ್ವೇಯ ಡೀಸೆಲ್ ವೆಚ್ಚ ವಾರ್ಷಿಕ 668 ಕೋಟಿ ರೂ.ಗಳಷ್ಟಿದ್ದು, ಈ ನೂತನ ಕ್ರಮದಿಂದಾಗಿ ವಾರ್ಷಿಕ ಆದಾಯದಲ್ಲಿ 450 ಕೋಟಿ ರೂ. ಹೆಚ್ಚಳವಾಗುವ ಅಂದಾಜಿದೆ. ಪಿಟ್ ಲೈನ್‌ಗಳಲ್ಲಿ ಬಳಸುವ ಡೀಸೆಲ್ ಚಾಲಿತ ಜನರೇಟರ್‌ಗಳಿಂದಾಗಿ ಪ್ರತಿನಿತ್ಯ 1,84,000 ಲೀಟರ್ ಡೀಸೆಲ್ ಖರ್ಚಾಗುತ್ತಿದೆ
ಭಾರತೀಯ ರೈಲ್ವೇಯ ಜಾಲದ ಉದ್ದಗಲಕ್ಕೂ ಇರುವ ಕೋಚ್‌ಗಳ ನಿರ್ವಹಣಾ ಪಿಟ್‌ಗಳಿಗೆ ಗ್ರಿಡ್‌ಗಳ ಮೂಲಕ 750 ವ್ಯಾಟ್ ವಿದ್ಯುತ್ ಸರಬರಾಜು ಮಾಡಲು ಯೋಜನೆ ರೂಪಿಸಲಾಗಿದೆ.