ಲಕ್ಷಾಂತರ ಜನರಿಗೆ ಪ್ರತಿನಿತ್ಯ ಕಾಫಿ ಕುಡಿಯೋ ಅಭ್ಯಾಸವಿದೆ. ಆದ್ರೆ ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದೋ ಅಥವಾ ಕೆಟ್ಟದೋ ಅನ್ನೋದು ಬಹುತೇಕರಿಗೆ ಅರಿವಿಲ್ಲ. ಕಾಫಿ ಸೇವನೆ ಮಿತವಾಗಿದ್ದರೆ ಒಳ್ಳೆಯದು, ಅತಿಯಾದ್ರೆ ಆರೋಗ್ಯಕ್ಕೆ ಹಾನಿ ತಪ್ಪಿದ್ದಲ್ಲ. ಬಹುತೇಕ ಜನರು ದೈಹಿಕ ಆಯಾಸ ಕಡಿಮೆ ಮಾಡಿಕೊಳ್ಳಲು, ಅರೆನಿದ್ರಾವಸ್ಥೆಯಿಂದ ಪಾರಾಗಲು ಕಾಫಿ ಕುಡಿಯುತ್ತಾರೆ.
ಕಾಫಿ ಕುಡಿಯೋದ್ರಿಂದ ಜಾಗರೂಕತೆ, ಗಮನ ಮತ್ತು ಏಕಾಗ್ರತೆ ಹೆಚ್ಚುತ್ತದೆ. ದೇಹದ ಸಮನ್ವಯತೆಯನ್ನೂ ಕಾಫಿ ಕಾಪಾಡುತ್ತದೆ. ಕೆಫಿನ್ ಕಾಫಿಯಲ್ಲಿ ಕಂಡುಬರುವ ಕಹಿಯಾದ ಅಂಶ. ಚಹಾ, ತಂಪು ಪಾನೀಯ, ಚಾಕಲೇಟ್, ಮತ್ತು ಕೆಲವು ಔಷಧಗಳಲ್ಲೂ ನರ ಉತ್ತೇಜಕವಾಗಿ ಇದನ್ನು ಬಳಸುತ್ತಾರೆ. ಕೆಲವರು ದಿನಕ್ಕೆ 2-4 ಕಪ್ ಕಾಫಿ ಕುಡಿಯುತ್ತಾರೆ. ಆದ್ರೆ ಅತಿಯಾಗಿ ಕಾಫಿ ಕುಡಿದರೆ ಕೆಲವೊಂದು ಸಮಸ್ಯೆಗಳು ಶುರುವಾಗುತ್ತವೆ.
ನಿದ್ರಾಹೀನತೆ, ತಲೆನೋವು ಅಥವಾ ತಲೆತಿರುಗುವಿಕೆ, ಅಸಹಜ ಹೃದಯ ಬಡಿತ, ಅಧಿಕ ರಕ್ತದೊತ್ತಡ, ದೌರ್ಬಲ್ಯ, ಸುಸ್ತು, ಭಯ, ಅಸ್ಥಿರತೆ, ದೀರ್ಘಕಾಲದ ಅಪದಮನಿ ಸ್ಟಿಫ್ನೆಸ್, ಉದರ ಬಾಧೆ, ಡಿಹೈಡ್ರೇಶನ್ ಹೀಗೆ ಹಲವು ಆರೋಗ್ಯ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಗರ್ಭಿಣಿಯರು ಹೆಚ್ಚಾಗಿ ಕೆಫಿನ್ ಸೇವನೆ ಮಾಡಿದರೆ ಹುಟ್ಟುವ ಮಗುವಿನ ತೂಕ ಕಡಿಮೆಯಾಗುತ್ತದೆ ಅಂತಾ ಹೇಳಲಾಗುತ್ತದೆ.
ಮಕ್ಕಳು ಕೆಫಿನ್ ಸೇವನೆ ಮಾಡುವುದು ಒಳ್ಳೆಯದಲ್ಲ. ಮಧ್ಯವಯಸ್ಕರು ಹಾಗೂ ವೃದ್ಧರು ರಾತ್ರಿ ಸರಿಯಾಗಿ ನಿದ್ದೆ ಮಾಡಬೇಕಂದ್ರೆ ಮಧ್ಯಾಹ್ನ ಊಟದ ನಂತರ ಕಾಫಿ ಅಥವಾ ಚಹಾ ಸೇವಿಸಬೇಡಿ ಅಂತಾ ವೈದ್ಯರೇ ಸೂಚಿಸುತ್ತಾರೆ. ಕೆಫಿನ್ ಅನ್ನು ಸೈಕೋ ಆ್ಯಕ್ಟಿವ್ ಡ್ರಗ್ ಆಗಿಯೂ ಬಹಳಷ್ಟು ಕಡೆಗಳಲ್ಲಿ ಬಳಸಲಾಗುತ್ತಿದೆ.