ಬೆಕ್ಕುಗಳು ಶತಮಾನಗಳಿಂದಲೂ ಮನುಷ್ಯರೊಂದಿಗೆ ವಾಸಿಸುತ್ತಿವೆ. ಆದರೆ ಇದುವರೆಗೂ ಅವುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಅವುಗಳ ದೇಹರಚನೆ ಕೂಡ ವಿಶಿಷ್ಟವಾಗಿದೆ. ಬೆಕ್ಕುಗಳು ಈ ಭೂಮಿಯ ಮೇಲಿನ ಅತ್ಯಂತ ನಿಗೂಢ ಜೀವಿಗಳಲ್ಲಿ ಒಂದಾಗಿವೆ. ಒಂದು ಕಾಲದಲ್ಲಿ ಬೆಕ್ಕುಗಳು ಈ ಭೂಮಿಯನ್ನು ಆಳುತ್ತಿದ್ದವು ಎಂಬ ನಂಬಿಕೆಯೂ ಇದೆ.
ಬೆಕ್ಕುಗಳು ದೇಹದಲ್ಲಿ ಕೂಡ ವಿಶೇಷ ಶಕ್ತಿಯಿದೆ. ಚಿಕ್ಕ ಚಿಕ್ಕ ಜಾಗಗಳಲ್ಲೂ ಅವು ಸರಾಗವಾಗಿ ಹೋಗಬಲ್ಲವು. ಎಷ್ಟೇ ಎತ್ತರದಿಂದ ಜಿಗಿದರೂ ಬೆಕ್ಕಿಗೆ ಅಪಾಯವಾಗುವುದಿಲ್ಲ. ಅಮೆರಿಕದಲ್ಲಿ ಬೆಕ್ಕೊಂದು ಅಪಾರ್ಟ್‌ಮೆಂಟ್‌ನ 19ನೇ ಮಹಡಿಯಿಂದ ಬಿದ್ದರೂ ಬದುಕುಳಿದೆ. ಇಷ್ಟು ಎತ್ತರದಿಂದ ಬಿದ್ದರೂ ಬೆಕ್ಕು ಬದುಕುವುದು ಹೇಗೆ ಎಂಬ ಪ್ರಶ್ನೆ ಮೂಡುತ್ತದೆ.
1987ರಲ್ಲಿ ನಡೆಸಿದ ಸಂಶೋಧನೆಯಲ್ಲಿ ನ್ಯೂಯಾರ್ಕ್‌ನ ಪಶುವೈದ್ಯಕೀಯ ಆಸ್ಪತ್ರೆಯಿಂದ ಎತ್ತರದ ಕಟ್ಟಡಗಳಿಂದ ಬಿದ್ದ 132 ಬೆಕ್ಕುಗಳ ಬಗ್ಗೆ ಮಾಹಿತಿಯನ್ನು ತೆಗೆದುಕೊಳ್ಳಲಾಗಿದೆ. ಇವುಗಳ ಪೈಕಿ 90 ಪ್ರತಿಶತದಷ್ಟು ಬದುಕುಳಿದಿವೆ. ಕೇವಲ 37 ಪ್ರತಿಶತದಷ್ಟು ಬೆಕ್ಕುಗಳಿಗೆ ಚಿಕಿತ್ಸೆ ನೀಡಲಾಗಿದೆ. 32ನೇ ಮಹಡಿಯಿಂದ ಬಿದ್ದ ಬೆಕ್ಕಿಗೆ ಒಂದು ಹಲ್ಲು ಮುರಿದಿತ್ತು. ಶ್ವಾಸಕೋಶದ ಸಮಸ್ಯೆ ಕಾಣಿಸಿಕೊಂಡಿತ್ತು. ಚಿಕಿತ್ಸೆ ಬಳಿಕ ಅದು ಕೂಡ ಗುಣಮುಖವಾಗಿದೆ.
ಪಶುವೈದ್ಯರ ಪ್ರಕಾರ ಬೆಕ್ಕುಗಳಲ್ಲಿನ ಈ ವಿಶೇಷತೆ ಭೌತಶಾಸ್ತ್ರ, ವಿಕಾಸ ಮತ್ತು ಶರೀರಶಾಸ್ತ್ರದಲ್ಲಿದೆ. ಬೆಕ್ಕುಗಳ ಶರೀರ ವಿಶಿಷ್ಟವಾಗಿ ವಿನ್ಯಾಸವಾಗಿರುವುದರಿಂದ ಎಷ್ಟೇ ಎತ್ತರದಿಂದ ಬಿದ್ದರೂ ಬೆಕ್ಕುಗಳಿಗೆ ಹಾನಿಯಾಗುವುದಿಲ್ಲ.