ದೇಶದ ರಾಜಕೀಯದಲ್ಲಿ ಕೇವಲ ನಾಲ್ಕು ದಶಕಗಳಿಂದೀಚೆಗೆ ಬಿಜೆಪಿಯ ಬೆಳವಣಿಗೆ ಹಂತಹಂತವಾಗಿ ಗಮನಾರ್ಹ ಏರಿಕೆ ಕಂಡಿದೆ. 1980ರ ಏಪ್ರಿಲ್ 6ರಂದು ಅಧಿಕೃತವಾಗಿ ಸ್ಥಾಪನೆಯಾದ ಪಕ್ಷವು ಜನಸಂಘದ ನೆರಳಿನಿಂದ ಹೊರಹೊಮ್ಮಿತು.
ಜನಸಂಘವನ್ನು 1951ರಲ್ಲಿ ಶ್ಯಾಮ ಪ್ರಸಾದ್ ಮುಖರ್ಜಿ ಸ್ಥಾಪಿಸಿದ್ದರು. 1977ರಲ್ಲಿ ಆಗಿನ ಪ್ರಧಾನಿ ಇಂದಿರಾಗಾಂಧಿ ಅವರು ಹೇರಿದ ತುರ್ತು ಪರಿಸ್ಥಿತಿಯ ನಂತರ ಜನಸಂಘವು ಕೆಲವು ಇತರ ಪಕ್ಷಗಳೊಂದಿಗೆ ವಿಲೀನಗೊಂಡು ಜನತಾ ಪಕ್ಷವನ್ನು ರಚಿಸಿತು. ಜನತಾ ಪಕ್ಷವು 1980ರಲ್ಲಿ ವಿಸರ್ಜನೆಯಾಯಿತು ಮತ್ತು ಅದರ ಸದಸ್ಯರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ಮೊದಲ ಅಧ್ಯಕ್ಷರಾಗಿ ಬಿಜೆಪಿಯನ್ನು ರಚಿಸಿದರು.
42 ವರ್ಷಗಳ ನಂತರ, ಬಿಜೆಪಿ ಈಗ 1.4 ಶತಕೋಟಿ ಜನಸಂಖ್ಯೆಯಿರುವ ದೇಶ ಆಳುವ ಮತ್ತು 18 ರಾಜ್ಯಗಳಲ್ಲಿ ಸರ್ಕಾರಗಳನ್ನು ಹೊಂದಿರುವ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾಗಿ ಬೆಳೆದಿರುವುದು ವಿಶೇಷ ಸಂಗತಿಯಾಗಿದೆ.
ಪಕ್ಷದ 42ನೇ ಸಂಸ್ಥಾಪನಾ ದಿನದಂದು ತನ್ನ ಹೆಜ್ಜೆಗುರುತನ್ನು ಭಾರತದ ಪ್ರತಿಯೊಂದು ಮೂಲೆಗೂ ಹೇಗೆ ವಿಸ್ತರಿಸಿತು, ಭಾರತೀಯ ರಾಜಕೀಯದ ಆಧಾರಸ್ತಂಭ ಹೇಗಾಯಿತು ಎಂಬುದು ಕುತೂಹಲಕರವಾದ್ದು.
1984ರಲ್ಲಿ ಬಿಜೆಪಿ ತನ್ನ ಮೊಟ್ಟಮೊದಲ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಪಕ್ಷವಾಗಿ ಸ್ಪರ್ಧಿಸಿತು ಮತ್ತು ಕೇವಲ ಎರಡು ಸ್ಥಾನಗಳೊಂದಿಗೆ ತನ್ನ ಖಾತೆಯನ್ನು ತೆರೆಯಿತು, ಅದೇ ವರ್ಷದಲ್ಲಿ ಕಾಂಗ್ರೆಸ್‌ನ ಅದ್ಭುತ ಪ್ರದರ್ಶನದಿಂದ ಈ ಸಾಧನೆಯು ಮಸುಕಾಗಿತ್ತು. ಆದರೆ ಆ ಇಬ್ಬರು ಬಿಜೆಪಿ ನಾಯಕರಾದ ಆಂಧ್ರಪ್ರದೇಶದ ಚಂದುಪಟ್ಲ ಜಂಗಾ ರೆಡ್ಡಿ ಮತ್ತು ಗುಜರಾತ್‌ನ ಎ.ಕೆ. ಪಟೇಲ್ ಅವರ ಮೂಲ ವಿಜಯವು ಮುಂದಿನ ವರ್ಷಗಳಲ್ಲಿ ಆಗಿನ ಪ್ರಬಲ ಕಾಂಗ್ರೆಸ್ ಅನ್ನು ಎದುರಿಸಲು ಪಕ್ಷಕ್ಕೆ ಹೆಚ್ಚು ಬಲನೀಡಿತ್ತು.
2004 ಮತ್ತು 2009 ಹೊರತುಪಡಿಸಿ ನಂತರದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ತನ್ನ ಸ್ಥಾನಗಳ ಸಂಖ್ಯೆಯಲ್ಲಿ ಸ್ಥಿರವಾದ ಹೆಚ್ಚಳ ಕಂಡಿತು. 1989ರಲ್ಲಿ 85 ಸ್ಥಾನಗಳನ್ನು ಗೆದ್ದು 1991ರಲ್ಲಿ ಎರಡಂಕಿ ದಾಟಿತು.
2014 ಮತ್ತು 2019ರಲ್ಲಿ ಪಕ್ಷವು ನರೇಂದ್ರ ಮೋದಿಯವರ ನೇತೃತ್ವದಲ್ಲಿ ಐತಿಹಾಸಿಕ ವಿಜಯ ದಾಖಲಿಸಿತು. 2019ರಲ್ಲಿ ಬಿಜೆಪಿ ಮೊದಲ ಬಾರಿಗೆ ಸ್ವಂತ ಬಲದಿಂದ 300ರ ಗಡಿ ದಾಟಿತ್ತು.