ಮಹಿಳೆಯರಿಗೆ ತಿಂಗಳಿಗೊಮ್ಮೆ ಮುಟ್ಟು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಕೆಲವೊಮ್ಮೆ ತಿಂಗಳಲ್ಲಿ ಎರಡು ಬಾರಿ ಪಿರಿಯಡ್ಸ್ ಬರಬಹುದು. ಈ ರೀತಿ ಆಗುವುದು ಆತಂಕಕಾರಿ ವಿಷಯ. ಇದರ ಹಿಂದೆ ಹಲವು ಕಾರಣಗಳಿರಬಹುದು. ಪದೇ ಪದೇ ಈ ರೀತಿ ಆಗುತ್ತಿದ್ದರೆ ಸಮಯ ವ್ಯರ್ಥ ಮಾಡದೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.
ಪಿರಿಯಡ್ಸ್ ತಿಂಗಳಿಗೆ ಎರಡು ಬಾರಿ ಏಕೆ ಬರುತ್ತದೆ ಎಂಬುದರ ಹಿಂದಿನ ಕಾರಣಗಳನ್ನು ಹುಡುಕುವ ಮೊದಲು ಮೊದಲು ಪೀರಿಯಡ್ಸ್ ಸೈಕಲ್ ಅನ್ನು ಅರ್ಥಮಾಡಿಕೊಳ್ಳಬೇಕು. ಸರಾಸರಿ ಋತುಚಕ್ರವು ಸುಮಾರು 28 ದಿನಗಳವರೆಗೆ ಇರುತ್ತದೆ. ಕೆಲವರಿಗೆ 21 ರಿಂದ 35 ದಿನಗಳಿಗೊಮ್ಮೆ ಬರಬಹುದು. ಮುಟ್ಟಿನ ಚಕ್ರವು ಹಲವಾರು ಹಂತಗಳನ್ನು ಒಳಗೊಂಡಿರುತ್ತದೆ, ಇದರಲ್ಲಿ ಫೋಲಿಕ್ಯುಲರ್ ಹಂತ, ಅಂಡೋತ್ಪತ್ತಿ ಮತ್ತು ಲೂಟಿಯಲ್ ಹಂತಗಳಿವೆ.
ತಿಂಗಳಿಗೆ ಎರಡು ಬಾರಿ ಮುಟ್ಟಾಗುವುದಕ್ಕೆ ಕಾರಣ!
ಹಾರ್ಮೋನ್ ಅಸಮತೋಲನ: ತಿಂಗಳಿಗೆ ಎರಡು ಬಾರಿ ಮುಟ್ಟಾಗಲು ಕಾರಣ ಹಾರ್ಮೋನ್ ಅಸಮತೋಲನ. ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್‌ನಂತಹ ಹಾರ್ಮೋನುಗಳು ಋತುಚಕ್ರವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಈ ಹಾರ್ಮೋನ್‌ಗಳಲ್ಲಿನ ಅಸಮತೋಲನವು ಅನಿಯಮಿತ ಮುಟ್ಟಿಗೆ ಕಾರಣವಾಗಬಹುದು. ಇದಲ್ಲದೆ ಒತ್ತಡ, ವೈದ್ಯಕೀಯ ಪರಿಸ್ಥಿತಿಗಳು ಮತ್ತು ಜೀವನಶೈಲಿಯ ಬದಲಾವಣೆ ಕೂಡ ಹಾರ್ಮೋನುಗಳ ಅಸಮತೋಲನವನ್ನು ಪ್ರಚೋದಿಸಬಹುದು.
ಒತ್ತಡ: ಅತಿಯಾದ ಮಾನಸಿಕ ಒತ್ತಡವು ಋತುಚಕ್ರದ ಸಾಮಾನ್ಯ ಕಾರ್ಯಚಟುವಟಿಕೆಗೆ ಅಡ್ಡಿಪಡಿಸುತ್ತದೆ. ದೀರ್ಘಕಾಲದ ಒತ್ತಡ ಹಾರ್ಮೋನುಗಳ ಅಸಮತೋಲನ ಮತ್ತು ಅನಿಯಮಿತ ಮುಟ್ಟಿಗೆ ಕಾರಣವಾಗಬಹುದು. ಧ್ಯಾನ, ಪ್ರಾಣಾಯಾಮ ಮತ್ತು ವ್ಯಾಯಾಮದ ಮೂಲಕ ಒತ್ತಡ ನಿಯಂತ್ರಿಸುವುದು ಬಹಳ ಮುಖ್ಯ.
ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್): ಪಿಸಿಓಎಸ್ ಒಂದು ಸಾಮಾನ್ಯ ಹಾರ್ಮೋನ್ ಅಸ್ವಸ್ಥತೆ. ಇದು ಅನಿಯಮಿತ ಮುಟ್ಟಿಗೆ ಕಾರಣವಾಗಬಹುದು. ಪಿಸಿಓಎಸ್‌ನಿಂದ ಬಳಲುತ್ತಿರುವ ಮಹಿಳೆಯರ ಅಂಡಾಶಯದಲ್ಲಿ ಸಣ್ಣ ಚೀಲಗಳಿರುತ್ತವೆ. ಇದು ಅವರ ಋತುಚಕ್ರದ ಕ್ರಮಬದ್ಧತೆಗೆ ಅಡ್ಡಿಪಡಿಸುತ್ತದೆ. PCOS ಚಿಕಿತ್ಸೆಯೆಂದರೆ ಜೀವನಶೈಲಿಯ ಬದಲಾವಣೆ, ಔಷಧಿ ಮತ್ತು ಶಸ್ತ್ರಚಿಕಿತ್ಸೆ.
ಗರ್ಭಾಶಯದ ಫೈಬ್ರಾಯ್ಡ್‌ಗಳು: ಗರ್ಭಾಶಯದ ಫೈಬ್ರಾಯ್ಡ್‌ಗಳು ಕ್ಯಾನ್ಸರ್ ಅಲ್ಲದ ಬೆಳವಣಿಗೆಯಾಗಿದ್ದು, ಅದು ಗರ್ಭಾಶಯದಲ್ಲಿ ಅಥವಾ ಅದರ ಸುತ್ತಲೂ ಬೆಳೆಯಬಹುದು. ಅವುಗಳ ಗಾತ್ರ ಮತ್ತು ಸ್ಥಳವನ್ನು ಅವಲಂಬಿಸಿ, ಫೈಬ್ರಾಯ್ಡ್‌ಗಳು ಭಾರೀ ಅಥವಾ ಅನಿಯಮಿತ ರಕ್ತಸ್ರಾವವನ್ನು ಉಂಟುಮಾಡಬಹುದು. ತಿಂಗಳಿಗೆ ಎರಡು ಬಾರಿ ಮುಟ್ಟಾಗಲು ಸಹ ಇದು ಕಾರಣ.
ಜನನ ನಿಯಂತ್ರಣ: ಕೆಲವು ಜನನ ನಿಯಂತ್ರಣ ಮಾತ್ರೆಗಳು ಅಥವಾ ಗರ್ಭಾಶಯದ ಒಳಗಿನ ಸಾಧನಗಳು (IUDs) ಮುಟ್ಟಿನ ಮಾದರಿಗಳನ್ನು ಬದಲಾಯಿಸಬಹುದು. ಅನಿಯಮಿತ ರಕ್ತಸ್ರಾವವು ಮುಂದುವರಿದರೆ, ಪರ್ಯಾಯ ಜನನ ನಿಯಂತ್ರಣ ಮಾತ್ರೆಗಳ ಬಗ್ಗೆ ತಿಳಿದುಕೊಳ್ಳಲು ವೈದ್ಯರನ್ನು ಸಂಪರ್ಕಿಸಬೇಕು.
ಪೆರಿಮೆನೋಪಾಸ್: ಪೆರಿಮೆನೋಪಾಸ್ ಋತುಬಂಧಕ್ಕೆ ಕಾರಣವಾಗುವ ಪರಿವರ್ತನೆಯ ಹಂತವಾಗಿದೆ. ಇದು ಸಾಮಾನ್ಯವಾಗಿ ಮಹಿಳೆಯರು 40 ವರ್ಷಕ್ಕೆ ಬಂದಾಗ ಸಂಭವಿಸುತ್ತದೆ. ಈ ಸಮಯದಲ್ಲಿ, ಹಾರ್ಮೋನುಗಳ ಏರಿಳಿತಗಳು ಅನಿಯಮಿತ ಮುಟ್ಟಿಗೆ ಕಾರಣವಾಗಬಹುದು.
ಥೈರಾಯ್ಡ್ ಅಸ್ವಸ್ಥತೆಗಳು: ಹೈಪರ್ ಥೈರಾಯ್ಡಿಸಮ್ ಅಥವಾ ಹೈಪೋಥೈರಾಯ್ಡಿಸಮ್‌ನಂತಹ ಪರಿಸ್ಥಿತಿಗಳು ಋತುಚಕ್ರದ ಏರುಪೇರಿಗೆ ಕಾರಣವಾಗುತ್ತವೆ. ಥೈರಾಯ್ಡ್ ಗ್ರಂಥಿಯ ಹಾರ್ಮೋನ್ ಉತ್ಪಾದನೆಯ ಮೇಲೆ ಇದು ಪರಿಣಾಮ ಬೀರುತ್ತವೆ. ಥೈರಾಯ್ಡ್ ಅಸ್ವಸ್ಥತೆಗೆ ನಾವು ಪಡೆಯುವ ಚಿಕಿತ್ಸೆ ಮತ್ತು ಔಷಧಗಳಿಂದಾಗಿಯೂ ತಿಂಗಳಲ್ಲಿ ಎರಡು ಬಾರಿ ಮುಟ್ಟು ಬರುವ ಸಾಧ್ಯತೆ ಇರುತ್ತದೆ.
ತಿಂಗಳಿಗೆ ಎರಡು ಬಾರಿ ಮುಟ್ಟು ಕಾಣಿಸಿಕೊಂಡರೆ ಏನು ಮಾಡಬೇಕು?
ತಿಂಗಳಿಗೆ ಎರಡು ಬಾರಿ ಮುಟ್ಟು ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸಬೇಕು. ಸಂಪೂರ್ಣ ಮೌಲ್ಯಮಾಪನದ ಮೂಲಕ ಮೂಲ ಕಾರಣ ನಿರ್ಧರಿಸಿ ಚಿಕಿತ್ಸೆ ಪಡೆಯಿರಿ.