ಮಲಬದ್ಧತೆ ಗಂಭೀರ ಸಮಸ್ಯೆಯಲ್ಲಿ ಒಂದು. ಹಾಗಂತ ಅದಕ್ಕೆ ಹೆಚ್ಚು ಭಯಪಡುವ ಅಗತ್ಯವಿಲ್ಲ. ಕೆಲವೊಂದು ಮನೆ ಮದ್ದುಗಳು ನಿಮ್ಮ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಅದ್ರಲ್ಲಿ ಒಣ ದ್ರಾಕ್ಷಿ ಕೂಡ ಒಂದು.
ಈ ಒಣ ದ್ರಾಕ್ಷಿ ಜೀರ್ಣಕ್ರಿಯೆಗೆ ಸಹಾಯ ಮಾಡುವಲ್ಲಿ ಮತ್ತು ಮಲಬದ್ಧತೆಯನ್ನು ನಿವಾರಿಸುವಲ್ಲಿ ಅದ್ಭುತ ಕೆಲಸ ಮಾಡುತ್ತದೆ. ಮಲಬದ್ಧತೆ ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ 8-10 ಕಪ್ಪು ಒಣದ್ರಾಕ್ಷಿಗಳನ್ನು ತೆಗೆದುಕೊಳ್ಳಿ. ಅದನ್ನು ರಾತ್ರಿ ನೀರಿನಲ್ಲಿ ನೆನೆಹಾಕಿ. ಬೆಳಿಗ್ಗೆ ನೆನೆಸಿದ ನೀರಿನಲ್ಲಿಯೇ ಒಣ ದ್ರಾಕ್ಷಿಯನ್ನು ಹಿಸುಕಿ ನೀರಿನ ಸಮೇತ ಅದರ ಸೇವನೆ ಮಾಡಿ. ಈ ಸುಲಭವಾದ ಪರಿಹಾರವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ಒಣದ್ರಾಕ್ಷಿಯಲ್ಲಿ ಮಲಬದ್ಧತೆಗೆ ಪರಿಹಾರ ನೀಡುವ ನೈಸರ್ಗಿಕ ಗುಣವಿದೆ. ಮಕ್ಕಳಿಗೆ ಕೂಡ ನೀವು ಈ ಒಣ ದ್ರಾಕ್ಷಿಯನ್ನು ಯಾವುದೇ ಭಯವಿಲ್ಲದೆ ನೀಡಬಹುದು. ಚಳಿಗಾಲದಲ್ಲಿ ಮಕ್ಕಳು ಕೂಡ ಮಲಬದ್ಧತೆ ಸಮಸ್ಯೆ ಎದುರಿಸುತ್ತಾರೆ. ಕಪ್ಪು ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿ ಸೇವನೆ ಮಾಡಿದಾಗ ನಮಗೆ ಫೈಬರ್ ಸಿಗುತ್ತದೆ. ಈ ಫೈಬರ್, ಮಲಬದ್ಧತೆ ಕಡಿಮೆ ಮಾಡುವ ಶಕ್ತಿ ಹೊಂದಿದೆ. ನೀವು ಹಾಗೆಯೇ ಒಣದ್ರಾಕ್ಷಿ ಸೇವನೆ ಮಾಡುವುದಕ್ಕಿಂತ ನೆನೆಸಿದ ಒಣದ್ರಾಕ್ಷಿ ಸೇವನೆ ಮಾಡೋದು ಹೆಚ್ಚು ಪರಿಣಾಮಕಾರಿ.
ಒಣದ್ರಾಕ್ಷಿ ಔಷಧಿ ಗುಣವನ್ನು ಹೊಂದಿದೆ. ನಿಮ್ಮ ದೇಹಕ್ಕೆ ಶಕ್ತಿ ನೀಡುವ ಕೆಲಸ ಮಾಡುತ್ತದೆ. ನೀವು ವ್ಯಾಯಾಮಕ್ಕಿಂತ ಮೊದಲು ಇದರ ಸೇವನೆ ಮಾಡೋದು ಉತ್ತಮ. ಕ್ಯಾಲ್ಸಿಯಂ ಮತ್ತು ಬೋರಾನ್‌ನಂತಹ ಅಗತ್ಯ ಪೋಷಕಾಂಶಗಳನ್ನು ನಮ್ಮ ದೇಹಕ್ಕೆ ಒದಗಿಸುವ ಕೆಲಸವನ್ನು ಇದು ಮಾಡುತ್ತದೆ. ರಕ್ತದೊತ್ತಡ ಸಮಸ್ಯೆ ಹಾಗೂ ಹೃದಯ ರೋಗದಿಂದ ನಮ್ಮನ್ನು ದೂರವಿಡಲು ಒಣದ್ರಾಕ್ಷಿ ಪರಿಣಾಮಕಾರಿ.