ಸಿಲಿಕಾನ್ ಸಿಟಿ, ಸ್ಟಾರ್ಟ್‌ಅಪ್ ಜಾಲ, ಉದ್ಯಾನ ನಗರಿ ಎಂಬ ಅಡ್ಡನಾಮಗಳು ಕೇಳಲು ಎಷ್ಟು ಹಿತವಾಗಿದೆಯೋ ಅಷ್ಟೇ ಕರ್ಕಶಾನುಭವ ಕೊಡುವ ಮತ್ತೊಂದು ಅಡ್ಡನಾಮ ಬೆಂಗಳೂರಿಗೆ ಇದೆ – ಟ್ರಾಫಿಕ್ ಜಾಮ್ ಸಿಟಿ.
ನಗರದ ಟ್ರಾಫಿಕ್ ದಟ್ಟಣೆ ಕಂಟೆಂಟ್ ಸೃಷ್ಟಿಕರ್ತರಿಗೆ ಹುಲುಸಾದ ಅವಕಾಶಗಳನ್ನು ಸೃಷ್ಟಿಸಿದ್ದು, ಇದೇ ವಿಚಾರವಾಗಿ ಲೆಕ್ಕವಿದಲ್ಲದಷ್ಟು ಮೀಮ್‌ಗಳು, ಟ್ರೋಲ್‌ಗಳು, ಕಿರು ಚಿತ್ರಗಳೆಲ್ಲಾ ಬಂದಿವೆ.
ಸಾಯಿ ಚಂದ್ ಬಯ್ಯವರಪು ಹೆಸರಿನ ನೆಟ್ಟಿಗರೊಬ್ಬರು ಶೇರ್ ಮಾಡಿರುವ ವಿಡಿಯೋವೊಂದು ಬೆಂಗಳೂರು ಸಂಚಾರ ದಟ್ಟಣೆಯ ವಿಡಂಬನಾತ್ಮಕ ಚಿತ್ರಣ ಕೊಟ್ಟಿದೆ.
ಬಿಎಂಟಿಸಿ ಬಸ್ ಚಾಲಕರೊಬ್ಬರು ತಮ್ಮ ಬಸ್ಸು ಟ್ರಾಫಿಕ್ ಒಂದದಲ್ಲಿ ಸಿಕ್ಕಿಕೊಂಡ ನಡುವೆಯೇ ಟಿಫಿನ್ ಬಾಕ್ಸ್ ತೆರೆದು ಭೋಜನ ಸವಿಯುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.
ಈ ಪೋಸ್ಟ್‌ಗೆ 14 ಲಕ್ಷಕ್ಕೂ ಅಧಿಕ ವೀಕ್ಷಣೆಗಳು ಸಂದಾಯವಾಗಿವೆ.
“ಟ್ರಾಫಿಕ್ ಕಾರಣದಿಂದಾಗಿ ಚಾಲಕರಿಗೆ ಸರಿಯಾಗಿ ಕುಳಿತು ಊಟ ಮಾಡಲೂ ಸಾಧ್ಯವಾಗದಿರುವುದು ನೋವಿನ ಸಂಗತಿ,” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದಾರೆ. “ನಾನೂ ಸಹ ಹೀಗೆ ಆಫೀಸಿಗೆ ಹೋಗುವ ಮಾರ್ಗ ಮಧ್ಯೆಯೇ ಊಟ ಮಾಡುತ್ತೇನೆ. ವಿಪರೀತ ಟ್ರಾಫಿಕ್ ದಟ್ಟಣೆ ಇರುವ ಕಾರಣ ನಾನು ಒಂದೇ ರಸ್ತೆಯಲ್ಲಿ ಕೆಲವೊಮ್ಮ 15-20 ನಿಮಿಷಗಳನ್ನು ಕಳೆಯುತ್ತೇನೆ,” ಎಂದು ಮತ್ತೊಬ್ಬರು ಹೇಳಿಕೊಂಡಿದ್ದಾರೆ.