ಅಲ್ಲು ಅರ್ಜುನ್ ಬಂಧನದ ಬಗ್ಗೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಪ್ರತಿಕ್ರಿಯೆ ಚರ್ಚೆಗೆ ಕಾರಣವಾಗಿದೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಸಂತ್ರಸ್ತೆಯ ಕುಟುಂಬದ ಪರ ನಾನಿದ್ದೇನೆ, ಯಾರೇ ಏನೇ ಮಾಡಿದರೂ ಕಾನೂನು ಪ್ರಕಾರ ಬಂಧಿಸಲಾಗುತ್ತದೆ ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ.
ಇದರ ಜೊತೆಗೆ “ನಾವು ಭಾರತ-ಪಾಕಿಸ್ತಾನ ಗಡಿಯಲ್ಲಿ ಹೋರಾಡಿದವರ ಬಗ್ಗೆ ಮಾತನಾಡುತ್ತಿದ್ದೇವೆಯೇ ? ಇಲ್ಲವಲ್ಲ, ಹಣ ಹೂಡಿ ವ್ಯಾಪಾರ ಮಾಡುವ ಸಿನಿಮಾ ನಟ. ಕಾನೂನಿನ ಮುಂದೆ ಎಲ್ಲರೂ ಸಮಾನರು. ನೀವು ಮೊದಲು ಸಂತ್ರಸ್ತೆಯ ಕುಟುಂಬದ ಬಗ್ಗೆ ಕೇಳಿದರೆ ಉತ್ತಮ” ಎಂದು ಸಂದರ್ಶನದಲ್ಲಿ ಹೇಳಿದ್ದರು.
ಇನ್ನೂ ಒಂದು ಕುತೂಹಲಕಾರಿ ವಿಷಯವೆಂದರೆ ರೇವಂತ್ ರೆಡ್ಡಿ, ಅಲ್ಲು ಅರ್ಜುನ್ ಅವರ ಮಾವ ಕಂಚಾರ್ಲ ಚಂದ್ರಶೇಖರ್ ರೆಡ್ಡಿ ನನ್ನ ಸಂಬಂಧಿ ಎಂದು ಹೇಳಿದ್ದಾರೆ. ಅಂದರೆ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಸಂಬಂಧಿ.
ಇದು ಅವರು ಹೇಗೆ ಸಂಬಂಧ ಹೊಂದಿದ್ದಾರೆ ಎಂಬ ಕುತೂಹಲಕಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಆದರೆ ಮೂಲಗಳ ಪ್ರಕಾರ ದೂರದ ಸಂಬಂಧಿಗಳು ಎಂದು ಹೇಳಲಾಗಿದೆ.
ಚಂದ್ರಶೇಖರ್ ರೆಡ್ಡಿ ಅವರು ಪ್ರಮುಖ ಉದ್ಯಮಿ ಮತ್ತು ಹೈದರಾಬಾದ್‌ನಲ್ಲಿರುವ SCIENT ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (SIT) ಅಧ್ಯಕ್ಷರಾಗಿದ್ದಾರೆ.
ಅವರು ಬಹಳ ಹಿಂದೆಯೇ ಕಾಂಗ್ರೆಸ್‌ನಲ್ಲಿದ್ದವರು ಮತ್ತು ಪಕ್ಷದ ಯುವ ಘಟಕದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದವರು. ಆದರೆ ಅವರು 2014 ರ ನಂತರ BRS ಗೆ ಸೇರಿದ್ದರು.
ಕೆಸಿಆರ್ ಇತ್ತೀಚೆಗಷ್ಟೇ ಅಧಿಕಾರ ಕಳೆದುಕೊಂಡ ಬಳಿಕ ಕಂಚಾರ್ಲ ಚಂದ್ರಶೇಖರ್ ರೆಡ್ಡಿ ಕಾಂಗ್ರೆಸ್ ಸೇರಿ ಮಲ್ಕಾಜ್‌ಗಿರಿ ಸಂಸತ್ ಟಿಕೆಟ್ ಪಡೆಯಲು ಯತ್ನಿಸಿದರಾದರೂ ಸಿಗಲಿಲ್ಲ.
ಚಂದ್ರಶೇಖರ್ ರೆಡ್ಡಿಯವರೂ ಬಂಧನವನ್ನು ತಡೆಯುವಲ್ಲಿ ಸರ್ಕಾರದೊಂದಿಗೆ ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.
ಏತನ್ಮಧ್ಯೆ, ಚಂದ್ರಶೇಖರ್ ರೆಡ್ಡಿ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಯಾವುದೇ ವಿವಾದಾತ್ಮಕ ಹೇಳಿಕೆಗಳನ್ನು ನೀಡಿಲ್ಲ.
ಜೈಲಿನಿಂದ ಮನೆಗೆ ಬಂದ ಅಲ್ಲು ಅರ್ಜುನ್ ರನ್ನು ನೋಡಿ ಅಲ್ಲು ಸ್ನೇಹಾ ರೆಡ್ಡಿ ಭಾವುಕರಾದ ದೃಶ್ಯಗಳು ಅಂತರ್ಜಾಲದಲ್ಲಿ ಹರಿದಾಡುತ್ತಿವೆ.