ವಿಮಾನ ಪ್ರಯಾಣಿಕರನ್ನೆ ಟಾರ್ಗೆಟ್ ಮಾಡಿಕೊಂಡು ವಿದ್ಯಾರ್ಥಿ ಸೋಗಿನಲ್ಲಿ ವಂಚಿಸುತ್ತಿದ್ದ ವ್ಯಕ್ತಿಯೋರ್ವನನ್ನ ದೆಹಲಿ ಪೊಲೀಸರು ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಬಂಧಿತನನ್ನ, ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಮಾಡೆಲಾ ವೆಂಕಟ ದಿನೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಕಳೆದ ನಾಲ್ಕೈದು ವರ್ಷಗಳಲ್ಲಿ ಸುಮಾರು ನೂರಕ್ಕು ಹೆಚ್ಚು ವಿಮಾನ ಪ್ರಯಾಣಿಕರನ್ನ ಆರೋಪಿ ವೆಂಕಟ ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಶಾಖಪಟ್ಟಣದ ಪ್ರತಿಷ್ಠಿತ ವಿಶ್ವವಿದ್ಯಾಲಯದ ವಿದ್ಯಾರ್ಥಿ ಎಂದು ಹೇಳಿಕೊಂಡು, ನನ್ನ ವಿಮಾನ ಮಿಸ್ ಆಯಿತು. ನನ್ನ ಬಳಿ ಟಿಕೆಟ್ ಗು ದುಡ್ಡಿಲ್ಲ ಎಂದು ವಿಮಾನ ನಿಲ್ದಾಣದಲ್ಲಿರುತ್ತಿದ್ದ ಪ್ರಯಾಣಿಕರನ್ನ ಎಮೋಷನಲ್ ಬ್ಲಾಕ್ ಮೇಲ್ ಮಾಡಿ ದುಡ್ಡು ಪಡೆದುಕೊಂಡು ವಂಚಸುತ್ತಿದ್ದ ಈತ ವಂಚನೆಗೊಳಗಾದವರಿಂದಲೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ದೆಹಲಿಯ ಪಿಜಿಯೊಂದರಲ್ಲಿ ವಾಸವಾಗಿರುವ ವ್ಯಕ್ತಿಯೊಬ್ಬರು ಈ ವಂಚಕನ ಬಗ್ಗೆ ದೂರು ನೀಡಿದ್ದಾರೆ. ಕಳೆದ ಡಿಸೆಂಬರ್ 19ರಂದು ಬರೋಡಾದಿಂದ ದೆಹಲಿಗೆ ಆಗಮಿಸಿದ್ದ ಇವರನ್ನ(ದೂರುದಾರ) ಐಜಿಐ ವಿಮಾನ ನಿಲ್ದಾಣದಲ್ಲಿ ವಂಚಕ ವೆಂಕಟಾ ತಡೆದಿದ್ದಾನೆ. ನಾನು ಚಂಡೀಗಡದಿಂದ ಬಂದಿದ್ದೇನೆ, ನಾನು ವಿಶಾಖಪಟ್ಟಣಕ್ಕೆ ಹೋಗಬೇಕಿತ್ತು, ಆದರೆ ನನ್ನ ಫ್ಲೈಟ್ ಮಿಸ್ ಆಗಿದೆ ಎಂದು 15ಸಾವಿರ ಟಿಕೆಟ್ ಜೊತೆಗೆ ಫೇಕ್ ಐಡಿ ಕಾರ್ಡನ್ನು ತೋರಿಸಿದ್ದಾನೆ. ಈಗ ನನ್ನ ಬಳಿ ಕೇವಲ 6,500 ರೂಪಾಯಿ ಅಷ್ಟೇ ಇದೆ, ದಯವಿಟ್ಟು ಟಿಕೆಟ್ ಖರೀದಿಸಲು ಹಣ ಸಹಾಯ ಮಾಡಿ ಎಂದು ಕಥೆ ಕಟ್ಟಿ ಕೇಳಿಕೊಂಡಿದ್ದಾನೆ. ಈತನ ಮಾತಿಗೆ ಮರುಳಾದ ದೂರುದಾರ ವಂಚಕನಿಗೆ 9,250ರೂಪಾಯಿ ಗೂಗಲ್ ಪೇ ಮುಖಾಂತರ ಪಾವತಿಸಿದ್ದಾರೆ. ಹಣ ಹಿಂದಿರುಗಿಸುತ್ತೇನೆ ಎಂದಿದ್ದ ವೆಂಕಟಾ ಎಷ್ಟು ಬಾರಿ ಕೇಳಿದರು ಪ್ರತಿಕ್ರಿಯಿಸದಿದ್ದಾಗ, ಪೊಲೀಸ್ ಕಂಪ್ಲೆಂಟ್ ಮಾಡಿದ್ದಾರೆ.
ಈ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡ ಉಪಪೊಲೀಸ್ ಆಯುಕ್ತ ಸಂಜಯ್ ತ್ಯಾಗಿ ಅವರ ತಂಡ ಡಿಸೆಂಬರ್ 30ರಂದು ವಿಮಾನ ನಿಲ್ದಾಣದಲ್ಲೆ ಈತನನ್ನ ಬಂಧಿಸಿದೆ. ವಿಮಾನ ನಿಲ್ದಾಣದ ಸಿಸಿ ಟಿವಿ ವಿಶ್ಲೇಷಿಸಿ ಮತ್ತು ಮೇಲ್ವಿಚಾರಣೆ ಮಾಡಿದ ತಂಡ, ಐಜಿಐ ವಿಮಾನ ನಿಲ್ದಾಣಕ್ಕೆ ಆಗಾಗ್ಗೆ ಭೇಟಿ ನೀಡುತ್ತಿದ್ದ ಒಬ್ಬ ಶಂಕಿತ ವ್ಯಕ್ತಿಯನ್ನು ಪತ್ತೆ ಮಾಡಿತ್ತು. ಡಿಸೆಂಬರ್ 30ರಂದು ಮತ್ತೊಬ್ಬ ಮಿಕಾನನ್ನ ಹುಡುಕಿಕೊಂಡು ಬಂದ ವೆಂಕಟಾನನ್ನ ಪೊಕೀಸರು ನಿಲ್ದಾಣದ ಟರ್ಮಿನಲ್ 2ನಲ್ಲಿ ಬಂಧಿಸಿದ್ದಾರೆ.