ತಾನು ಹುಟ್ಟುಹಾಕಿದ ವಿಮಾನಯಾನ ಸಂಸ್ಥೆಗೆ ಏರ್ ಇಂಡಿಯಾ ಎಂಬ ಹೆಸರು ಬಂದಿದ್ದರ ಹಿಂದಿನ ಆಸಕ್ತಿಕರ ಕಥೆಯನ್ನು ಟಾಟಾ ಸಮೂಹ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.
75 ವರ್ಷಗಳ ಹಿಂದೆ ಜನಿಸಿ, 69 ವರ್ಷಗಳ ಬಳಿಕ ಇದೀಗ ತನ್ನ ತವರು ಬಾಂಬೆ ಹೌಸ್‌ಗೆ ಮರಳಿರುವ ಏರ್ ಇಂಡಿಯಾದ ಇತಿಹಾಸವನ್ನು ಹಂಚಿಕೊಂಡಿರುವ ಟಾಟಾ ಸಮೂಹ ಕಂಪನಿ 1946ರ ಬುಲೆಟಿನ್ ಒಂದನ್ನು ಹಂಚಿಕೊಂಡಿದೆ.
ʼಮಹಾರಾಜʼನನ್ನು ಮನೆಗೆ ಸ್ವಾಗತಿಸಿದ ಟಾಟಾ ಸಮೂಹಕ್ಕೆ ಅಭಿನಂದನೆಗಳ ಮಹಾಪೂರ
“1946ರಲ್ಲಿ, ಟಾಟಾ ಏರ್‌ಲೈನ್ಸ್ ಟಾಟಾ ಸನ್ಸ್‌ನ ಭಾಗವಾಗಿದ್ದಿದ್ದು, ಪೂರ್ಣ ಪ್ರಮಾಣದ ಕಂಪನಿಯಾಗಿ ಬೆಳೆಯಿತು. ಆಗ ಅದಕ್ಕೆ ನಾವು ಹೆಸರನ್ನೂ ಇಡಬೇಕಾಗಿತ್ತು. ಇಂಡಿಯನ್ ಏರ್‌ಲೈನ್ಸ್, ಪ್ಯಾನ್ ಇಂಡಿಯನ್ ಏರ್‌ಲೈನ್ಸ್, ಟ್ರಾನ್ಸ್-ಇಂಡಿಯನ್ ಏರ್‌ಲೈನ್ಸ್ ಮತ್ತು ಏರ್-ಇಂಡಿಯಾ ಎಂಬ ಹೆಸರುಗಳು ನಾಮಕರಣದ ಆಯ್ಕೆಗಳಾಗಿ ಮುನ್ನೆಲೆಗೆ ಬಂದಿದ್ದವು. ಆದರೆ ಈ ವಿಚಾರವಾಗಿ ಅಂತಿಮ ನಿರ್ಧಾರ ಮಾಡಿದ್ದು ಯಾರು? 1946ರ ಟಾಟಾ ಮಾಸಿಕ ಬುಲೆಟಿನ್ ಓದಿದರೆ ನಿಮಗೆ ಗೊತ್ತಾಗುತ್ತದೆ,” ಎಂದು ಆ ದಿನದ ನಿಯತಕಾಲಿಕೆಯ ಸ್ಕ್ರೀನ್‌ಶಾಟ್ ಒಂದನ್ನು ಹಂಚಲಾಗಿದೆ.
ಟಾಟಾ ಸಮೂಹದ ಅನೇಕ ಹುದ್ದೆಗಳಲ್ಲಿ 60 ವರ್ಷಗಳ ಕಾಲ ಇದ್ದ ಖ್ಯಾತ ಅಣು ವಿಜ್ಞಾನಿ ಜೆ ಜೆ ಬಾಬಾ ಸಹಿ ಮಾಡಿರುವ ಈ ಬುಲೆಟಿನ್‌ನಲ್ಲಿ, ಏರ್ ಇಂಡಿಯಾ ಹುಟ್ಟಿಕೊಂಡ ಕಥೆಯನ್ನು ವಿವರಿಸಲಾಗಿದೆ.
ಮೇಲ್ಕಂಡ ನಾಲ್ಕು ಹೆಸರುಗಳ ಪೈಕಿ ಯಾವುದು ಸೂಕ್ತವೆಂದು ಆರಿಸಲು ಬಾಂಬೆ ಹೌಸ್‌ನಲ್ಲಿ ಜನಪ್ರಿಯ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿ, ಗ್ಯಾಲಪ್ ಮತದಾನ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಆ ವೇಳೆ ಅತ್ಯಂತ ಹೆಚ್ಚು ಮತಗಳನ್ನು ಪಡೆದ ಏರ್ ಇಂಡಿಯಾ (72 ಮತಗಳು) ಹಾಗೂ ಇಂಡಿಯನ್ ಏರ್‌ಲೈನ್ಸ್ (58) ಅಂತಿಮವಾಗಿ ಉಳಿದುಕೊಂಡಿದ್ದವು. ಇವುಗಳ ಪೈಕಿ ’ಏರ್ ಇಂಡಿಯಾ’ ಹೆಸರನ್ನು ಜನಪ್ರಿಯ ಆಯ್ಕೆಯಾಗಿ ಪರಿಗಣಿಸಲಾಯಿತು ಎಂಬ ವಿಚಾರ ಈ ಬುಲೆಟಿನ್‌ನಿಂದ ತಿಳಿದು ಬರುತ್ತದೆ.
1953ರಲ್ಲಿ ಸಾರ್ವಜನಿಕಗೊಂಡು, ಕಳೆದ 69 ವರ್ಷಗಳಿಂದ ಭಾರತ ಸರ್ಕಾರದ ಕೈಯಲ್ಲಿ ನಷ್ಟದ ನಡುವೆಯೇ ನಡೆದುಕೊಂಡು ಬಂದಿದ್ದ ಏರ್ ಇಂಡಿಯಾ ಸಮೂಹ ಇದೀಗ ತನ್ನ ಮಾತೃ ಸಂಸ್ಥೆ ಟಾಟಾ ಸಮೂಹಕ್ಕೆ ಮರಳಿದೆ. 18,000 ಕೋಟಿ ರೂಪಾಯಿಗಳ ಬಿಡ್ ಜಯಿಸಿದ ಟಾಟಾ ಸಮೂಹಕ್ಕೆ ಏರ್ ಇಂಡಿಯಾವನ್ನು ಭಾರತ ಸರ್ಕಾರ ಹಸ್ತಾಂತರ ಮಾಡಿದೆ.