
ಹೌದು, ಹೈದರಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯು ಅವರನ್ನು ಆಂಧ್ರದಲ್ಲಿ, ವಿಶೇಷವಾಗಿ ವಿವಿಐಪಿ ವಲಯಗಳಲ್ಲಿ ರಾತ್ರೋರಾತ್ರಿ ಪ್ರಸಿದ್ಧ ಅಡುಗೆಯವರನ್ನಾಗಿ ಮಾಡಿತು. ಕಾರ್ಯಕಾರಿಣಿ ಸಭೆಯಲ್ಲಿ ಅವರು ತಯಾರಿಸಿದ ಬಾಯಲ್ಲಿ ನೀರೂರಿಸುವ ಖಾದ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರಶಂಸೆ ವ್ಯಕ್ತವಾಗಿದೆ.
ಮಾಂಸಾಹಾರದ ಬಗ್ಗೆ ಒಲವು ಹೊಂದಿರುವ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ವಾರಂಗಲ್ ಅಥವಾ ಕರೀಂ ನಗರದಲ್ಲಿದ್ದಾಗ ಯಾದಮ್ಮ ಅವರು ತಯಾರಿಸಿದ ಖಾದ್ಯಗಳನ್ನು ರುಚಿ ಸವಿದಿದ್ದರು. ಗ್ಯಾನೋಸ್ ಫ್ರೈ, ಕೌಂಟಿ ಚಿಕನ್‌ನಿಂದ ಮಾಡಿದ ಸೂಪ್, ಜೆಲ್ಲಿ ಫಿಶ್ ಸೂಪ್, ಯಾದಮ್ಮ ತಯಾರಿಸಿದ ಮಟನ್ ಬೋಟಿಯನ್ನು ಸಿಎಂ ಇಷ್ಟಪಡುತ್ತಾರೆ. ಇದೀಗ ಸೆಲೆಬ್ರೆಟಿಗಳ ಕಾರ್ಯಕ್ರಮಗಳಿಗೆ ಇವರದ್ದೇ ಕೈರುಚಿಯಾಗಿದೆ.
ಹಾಗಂತ ಸಮಾಜದಲ್ಲಿ ವಿವಿಐಪಿಗಳ ವಲಯದಲ್ಲಿ ಸೆಲೆಬ್ರಿಟಿ ಅಡುಗೆಯ ಸ್ಥಾನಮಾನವನ್ನು ಗಳಿಸಲು ಯಾದಮ್ಮಗೆ ಇದು ಸುಲಭದ ಹಾದಿಯಾಗಿರಲಿಲ್ಲ. ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮತ್ತು ಸಾಂಪ್ರದಾಯಿಕ ಆಹಾರ ತಯಾರಿಕೆಯಲ್ಲಿನ ಬದ್ಧತೆ ಈಕೆಯನ್ನು ಇಷ್ಟು ಖ್ಯಾತಿ ತಂದುಕೊಡಲು ಕಾರಣವಾಗಿದೆ. 29 ವರ್ಷಗಳ ಹಿಂದೆ, ಜೀವನೋಪಾಯಕ್ಕಾಗಿ ಅಡುಗೆ ಮಾಡಲು ಶುರು ಮಾಡಿದ ಈಕೆ ಇಂದು ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ.
ಯಾದಮ್ಮ ತಮ್ಮ 14ನೇ ವಯಸ್ಸಿನಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಚಂದ್ರಯ್ಯ ಎಂಬುವವರನ್ನು ವಿವಾಹವಾದ್ರು. ಇವರಿಬ್ಬರಿಗೆ ಒಂದು ಗಂಡು ಮಗು ಜನಿಸಿತು. ಆ ಮಗುವಿಗೆ ಮೂರು ತಿಂಗಳಾಗಿದ್ದಾಗ ಚಂದ್ರಯ್ಯ ಇದ್ದಕ್ಕಿದ್ದಂತೆ ಇಹಲೋಕ ತ್ಯಜಿಸಿದ್ರು. ಪತಿಯ ನಿಧನದ ಬಳಿಕ ಕಷ್ಟ ಜೀವನದ ಹಾದಿ ತುಳಿದ ಯಾದಮ್ಮ, ತನ್ನ ಮಗನೊಂದಿಗೆ ಕರೀಂ ನಗರಕ್ಕೆ ವಲಸೆ ಹೋದ್ರು. ಇಲ್ಲಿ ವಿವಿಧ ಮನೆಗಳಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸಲು ಪ್ರಾರಂಭಿಸಿದರು.
ವೆಂಕಣ್ಣ ಎಂಬ ಬಾಣಸಿಗ ಸಮಾರಂಭಗಳಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸಲು ತನ್ನ ಸಹಾಯಕಿಯಾಗಿ ಆಕೆಯನ್ನು ಕೆಲಸಕ್ಕೆ ನೇಮಿಸಿಕೊಂಡ್ರು. ಇಲ್ಲಿಂದ ಈಕೆಯ ಜರ್ನಿ ಶುರುವಾಯಿತು. ಆಹಾರ ಪದಾರ್ಥಗಳನ್ನು ರುಚಿ ಮತ್ತು ನಿಖರತೆಯಿಂದ ತಯಾರಿಸುವಲ್ಲಿ ಅವರ ಪಾಂಡಿತ್ಯವು ಸಾಕಷ್ಟು ಹೆಸರು ಮತ್ತು ಖ್ಯಾತಿಯನ್ನು ತಂದು ಕೊಟ್ಟಿತು. ಅಲ್ಪಾವಧಿಯಲ್ಲಿಯೇ ರಾಜಕಾರಣಿಗಳಿಂದ ಹಿಡಿದು ಪೊಲೀಸ್ ಅಧಿಕಾರಿಗಳವರೆಗೆ ವಿಐಪಿಗಳ ಮನೆಗಳಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸುವ ಪಾಕತಜ್ಞೆಯಾಗಿದ್ದಾರೆ.