ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯಿಸಿಕೊಂಡ ಮುಗ್ಧ ಯುವತಿಯರನ್ನು ನಂಬಿಸಿ ಲೈಂಗಿಕ ಶೋಷಣೆ ಮಾಡಿದ ಅನೇಕ ಪ್ರಕರಣಗಳು ಈಗಾಗಲೇ ವರದಿಯಾಗಿದ್ದು, ಬಹುತೇಕ ಪ್ರಕರಣಗಳಲ್ಲಿ ಮರ್ಯಾದೆಗೆ ಅಂಜಿ ಸಂತ್ರಸ್ತೆಯರು ದೂರು ನೀಡಲು ಮುಂದೆ ಬರುವುದಿಲ್ಲ. ಆದರೆ ಮಹಾರಾಷ್ಟ್ರದಲ್ಲಿ ನಡೆದ ಪ್ರಕರಣ ಒಂದರಲ್ಲಿ 13 ವರ್ಷದ ಬಾಲಕಿ ಧೈರ್ಯ ತೋರಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಅತ್ಯಾಚಾರಿಯ ಬಂಧನವಾಗಿದೆ.
ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಈ ಘಟನೆ ನಡೆದಿದ್ದು, ಅಲ್ಲಿನ ವಕೋಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದ 13 ವರ್ಷದ ಬಾಲಕಿ ಆಗಸ್ಟ್ 15ರಂದು ನಾಪತ್ತೆಯಾಗಿದ್ದಳು. ಆಕೆಯನ್ನು ಎಲ್ಲೆಡೆ ಹುಡುಕಾಡಿದ ಕುಟುಂಬ ಸದಸ್ಯರು ಮರ್ಯಾದೆಗೆ ಅಂಜಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ್ದರು. ಆದರೆ ಆಕೆ ನಾಪತ್ತೆಯಾದ ಐದಾರು ದಿನಗಳ ಬಳಿಕ ಮರಳಿ ಬಂದಿದ್ದು, ಆಕೆಯಿಂದ ವಿವರ ತಿಳಿದ ಮನೆಯವರು ಶಾಕ್ ಆಗಿದ್ದಾರೆ.
ಸಾಮಾಜಿಕ ಜಾಲತಾಣದ ಮೂಲಕ ಈಕೆಯನ್ನು ಪರಿಚಯಿಸಿಕೊಂಡಿದ್ದ ಮುಂಬೈನ ಗೊರೇಗಾಂವ್ ನಲ್ಲಿ ಕೆಲಸ ಮಾಡುತ್ತಿದ್ದ 21 ವರ್ಷದ ಯುವಕ ಮದುವೆ ಮಾಡಿಕೊಳ್ಳುವ ಆಮಿಷವೊಡ್ಡಿ ಅಂಧೇರಿಯ ಲಾಡ್ಜ್ ಒಂದಕ್ಕೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಅಷ್ಟೇ ಅಲ್ಲ ತನ್ನ ಹಳ್ಳಿಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಗುಜರಾತಿಗೆ ಕರೆದುಕೊಂಡು ಹೋದ ಬಳಿಕ ಅಲ್ಲಿಯೂ ಅತ್ಯಾಚಾರವೆಸಗಿದ್ದಾನೆ. ಹಣವೆಲ್ಲ ಖಾಲಿಯಾದ ಬಳಿಕ ಬಾಲಕಿಯನ್ನು ವಾಪಸ್ ಕಳುಹಿಸಿದ್ದು, ಮನೆಗೆ ಮರಳಿದ ಬಾಲಕಿ ಪೊಲೀಸರಿಗೆ ಇನ್ಸ್ಟಾಗ್ರಾಮ್ ನಲ್ಲಿ ಇದ್ದ ಆತನ ಫೋಟೋ ತೋರಿಸಿದ್ದು, ಅದರ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ.