ಬೆಂಗಳೂರು: ವಸತಿ ಯೋಜನೆಯಡಿ ಮಂಜೂರಾದ ಮನೆಗಳನ್ನು ನಿರ್ಮಾಣ ಮಾಡಲು ಫಲಾನುಭವಿಗಳು ‘ಇ- ಸ್ವತ್ತು’ ಹಾಜರುಪಡಿಸಲು ಸಾಧ್ಯವಾಗದೆ ಪರದಾಟ ನಡೆಸಿದ್ದಾರೆ.
‘ಇ- ಸ್ವತ್ತು’ ತೊಡಕು ಎದುರಾಗಿದ್ದು, ಫಲಾನುಭವಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜೀವ್ ಗಾಂಧಿ ವಸತಿ ನಿಗಮದ ನಿಯಮಕ್ಕೆ ಅನುಗುಣವಾಗಿ ಭೂ ದಾಖಲೆಯನ್ನು ಒದಗಿಸಲು ಸಾಧ್ಯವಾಗದೆ ಸಂಕಷ್ಟ ಎದುರಾಗಿದೆ.
ಬಡವರಿಗೆ ಸೂರಿನ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಅಂಬೇಡ್ಕರ್ ವಸತಿ ಯೋಜನೆ, ಬಸವ ವಸತಿ ಯೋಜನೆ ರೂಪಿಸಿದ್ದು, ಮೂರು ವರ್ಷದ ನಂತರ ಮನೆಗಳ ನಿರ್ಮಾಣಕ್ಕಾಗಿ ಮಂಜೂರಾತಿ ದೊರೆತಿದೆ. ಸೌಲಭ್ಯ ಪಡೆಯಲು ಕಾಯುತ್ತಿದ್ದ ಫಲಾನುಭವಿಗಳಿಗೆ ‘ಇ- ಸ್ವತ್ತು’ ನಿರಾಸೆ ತಂದಿದೆ.
ಗ್ರಾಮ ಠಾಣಾ ವ್ಯಾಪ್ತಿಯ ಕ್ರಮಬದ್ಧ ಆಸ್ತಿಗಳಿಗಾಗಿ ಗ್ರಾಮ ಪಂಚಾಯಿತಿ ವತಿಯಿಂದ ‘ಇ- ಸ್ವತ್ತು’ ನೀಡಲಾಗುತ್ತದೆ. ನಮೂನೆ -9, 11ಎ, 11ಬಿ ಕ್ರಮವಲ್ಲದ ಆಸ್ತಿ ಖಾತೆಗಳನ್ನು ದಿಶಾಂಕ್ ಆಪ್ ಮೂಲಕ ಸೃಜಿಸುವ ಅಧಿಕಾರ ಪಿಡಿಒಗೆ ಇದೆ. ಆಸ್ತಿ ದಾಖಲೆಗಳಲ್ಲಿನ ಗೊಂದಲದ ಕಾರಣ ‘ಇ- ಸ್ವತ್ತು’ ಪಡೆಯುವುದು ಕಷ್ಟ ಸಾಧ್ಯವಾಗಿದೆ.
ಈ ಹಿಂದೆ ಫಲಾನುಭವಿ ಕುಟುಂಬದ ಹೆಸರಲ್ಲಿ ನಿವೇಶನವಿದ್ದರೆ ಮನೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗುತ್ತಿತ್ತು. ಈಗ ಫಲಾನುಭವಿ ಅಥವಾ ಅವರ ಪತಿ, ಪತ್ನಿ ಹೆಸರಿಗೆ ‘ಇ- ಸ್ವತ್ತು’ ಇದ್ದರೆ ಮಾತ್ರ ಮಂಜೂರಾತಿ ಆದೇಶ ನೀಡಲಾಗುತ್ತದೆ. ಭೂ ಪರಿವರ್ತನೆ, ಪಾಲು, ಪೌತಿ ಖಾತೆಯ ತೊಡಕಿನಿಂದ ಇಂತಹ ಭೂಮಿಗೆ ‘ಇ- ಸ್ವತ್ತು’ ಸ್ವತ್ತು ಸೃಜಿಸಲು ಸಾಧ್ಯವಾಗುತ್ತಿಲ್ಲ.
ಅನೇಕರು ಭೂ ಪರಿವರ್ತನೆ ಮಾಡದೇ, ನಿರ್ಮಾಣವಾದ ಬಡಾವಣೆಯಲ್ಲಿ ನಿವೇಶನ ಹೊಂದಿದ್ದು, ಪೌತಿ ಖಾತೆ ಸಮಸ್ಯೆಯಿಂದ ‘ಇ- ಸ್ವತ್ತು’ ಪಡೆಯಲು ಆಗುತ್ತಿಲ್ಲ. ಇವೆಲ್ಲಾ ಕಾರಣದಿಂದ ‘ಇ- ಸ್ವತ್ತು’ ಹಾಜರುಪಡಿಸಲಾಗದೆ ವಸತಿ ಯೋಜನೆ ಅಡಿ ಮಂಜೂರಾದ ಮನೆ ನಿರ್ಮಿಸಿಕೊಳ್ಳಲು ಫಲಾನುಭವಿಗಳು ಪರದಾಟ ನಡೆಸುವಂತಾಗಿದೆ ಎಂದು ಹೇಳಲಾಗಿದೆ.