ಹೌಸ್ ಕೀಪಿಂಗ್ ಸಿಬ್ಬಂದಿಯೊಬ್ಬರು ಚಲಿಸುತ್ತಿರುವ ರೈಲಿನಿಂದ ರೈಲ್ವೆ ಹಳಿಗಳ ಮೇಲೆ ಕಸವನ್ನು ಎಸೆಯುವ ವೀಡಿಯೊ ವೈರಲ್ ಆದ ಬಳಿಕ ಸಾರ್ವಜನಿಕವಾಗಿ ಚರ್ಚೆ ಹುಟ್ಟುಹಾಕಿದೆ. ರೈಲ್ವೆ ಇಲಾಖೆಯಲ್ಲಿನ ತ್ಯಾಜ್ಯ ವಿಲೇವಾರಿ ಅಭ್ಯಾಸಗಳ ಬಗ್ಗೆ ಪ್ರಶ್ನೆ ಎತ್ತಲಾಗಿದೆ.
ಡಿಸೆಂಬರ್ 31 ರಂದು ಮುಂಬೈ ಮ್ಯಾಟರ್ಸ್ ಎಂಬ ಟ್ವಿಟರ್ ಪುಟದಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಹೌಸ್‌ಕೀಪಿಂಗ್ ತಂಡದ ವ್ಯಕ್ತಿಯೊಬ್ಬ ಚಲಿಸುವ ರೈಲಿನಿಂದ ಕಸ ತುಂಬಿದ ಚೀಲವನ್ನು ಎಸೆಯುತ್ತಿರುವುದನ್ನು ವಿಡಿಯೋ ಒಳಗೊಂಡಿದೆ. ನಂತರ ಆ ವ್ಯಕ್ತಿ ರೈಲಿನೊಳಗಿನಿಂದ ಆಹಾರ ತ್ಯಾಜ್ಯವನ್ನು ಹಳಿಗಳ ಮೇಲೆ ತಳ್ಳಿದ್ದಾನೆ.
ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಮಾಹಿತಿ ಪ್ರಕಾರ ”ರೈಲ್ವೇ ಸಹಾಯವಾಣಿ ಸಂಖ್ಯೆ 139 ಗೆ ಪ್ರಯಾಣಿಕರೊಬ್ಬರು ಈ ಬಗ್ಗೆ ದೂರು ನೀಡಿದ್ದಾರೆ. ಆದರೆ ಈ ಬಗ್ಗೆ ಗಮನ ಹರಿಸದೇ ದೂರು ಕೊಟ್ಟವರು ಯಾರು? ಯಾಕೆ ದೂರು ಕೊಟ್ಟರು ಎಂದು ಸಿಬ್ಬಂದಿ ಹೇಳುತ್ತಾರೆ. ಜೊತೆಗೆ ಕಸನಿರ್ವಹಣೆಗೆ ತಮಗೆ ಬೇಕಾದಷ್ಟು ಸಂಪನ್ಮೂಲ, ಸಾಕಷ್ಟು ಬ್ಯಾಗ್‌ಗಳನ್ನು ಒದಗಿಸಿಲ್ಲ. ಹಾಗಾಗಿ ತಾವು ಇರುವ ಅಲ್ಪ ಸಂಪನ್ಮೂಲಗಳಲ್ಲೇ ನಿರ್ವಹಿಸ್ತಿದ್ದೀವಿ ಎಂದು ಹೇಳುತ್ತಾರೆ ಎಂದು ಟ್ವಿಟರ್ ನಲ್ಲಿ ಪೋಸ್ಟ್ ಮಾಡಲಾಗಿದೆ.
ಪೋಸ್ಟ್ ವೈರಲ್ ಆಗುತ್ತಿದ್ದಂತೆ ಭಾರತೀಯ ರೈಲ್ವೆ ಪ್ರತಿಕ್ರಿಯಿಸಿದೆ. ಸೆಂಟ್ರಲ್ ರೈಲ್ವೆಯ ಮುಂಬೈ ವಿಭಾಗ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲು PNR ಮತ್ತು ರೈಲು ಸಂಖ್ಯೆಗಳನ್ನು ಕೇಳಿದೆ. ಜೊತೆಗೆ ಸಿಬ್ಬಂದಿ ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ ಎಂದು ಮತ್ತೊಂದು ಟ್ವೀಟ್‌ನಲ್ಲಿ ಪ್ರತಿಕ್ರಿಯಿಸಿದೆ.
ವೈರಲ್ ಪೋಸ್ಟ್ ನ ಕಾಮೆಂಟ್‌ಗಳ ವಿಭಾಗದಲ್ಲಿ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಘಟನೆಯ ಬಗ್ಗೆ ಅಸಹ್ಯ ವ್ಯಕ್ತಪಡಿಸಿದ್ದಾರೆ. ಇತರರು ರೈಲುಗಳಲ್ಲಿ ಪ್ರಯಾಣಿಸುವಾಗ ಅಂತಹ ಸಂದರ್ಭಗಳನ್ನು ಕಂಡ ಬಗ್ಗೆಯೂ ವಿಡಿಯೋ ಹಾಕಿ ತಿಳಿಸಿದ್ದಾರೆ.