ಜಮ್ಮು: ಜಮ್ಮು ಮತ್ತು ಕಾಶ್ಮೀರ ಪ್ರವಾಸೋದ್ಯಮವು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಇದೇ 7 ರಂದು ಶ್ರೀನಗರದ ದಾಲ್ ಸರೋವರ ಮತ್ತು ನಾಗೀನ್ ಸರೋವರದಲ್ಲಿ ನಡೆದ ಹೌಸ್‌ಬೋಟ್ ಉತ್ಸವದ ಅದ್ಭುತ ಚಿತ್ರಗಳನ್ನು ಹಂಚಿಕೊಂಡಿದೆ. ಕಾಶ್ಮೀರದ ಪ್ರವಾಸೋದ್ಯಮ ಇಲಾಖೆಯು ಆಯೋಜಿಸಿದ್ದ ಈ ಉತ್ಸವವನ್ನು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಉದ್ಘಾಟಿಸಿದರು.
ಉತ್ಸವದ ಪ್ರಮುಖ ಗುರಿಯು ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಆಗಿದೆ. ಈ ಎರಡು ದಿನಗಳ ಉತ್ಸವದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
“ಡಿಸೆಂಬರ್ 7-8 ರಂದು ದಾಲ್ ಲೇಕ್ ಶ್ರೀನಗರದಲ್ಲಿ ನಡೆದ ಹೌಸ್‌ಬೋಟ್ ಉತ್ಸವದ ಕೆಲವು ನೋಟಗಳು” ಎಂದು ಶೀರ್ಷಿಕೆಯನ್ನು ಇದಕ್ಕೆ ನೀಡಲಾಗಿದೆ. ಹಲವಾರು ಕಾಶ್ಮೀರಿ ಜನಪದ ಕಲಾವಿದರು ಲೇಸರ್ ಶೋ ಮತ್ತು ಲೈವ್ ಸಂಗೀತ ಕಾರ್ಯಕ್ರಮ ನೀಡಿರುವುದನ್ನು ಇದರಲ್ಲಿ ಕಾಣಬಹುದು.
ಏತನ್ಮಧ್ಯೆ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ನಿರ್ದೇಶನಾಲಯ (ಡಿಐಪಿಆರ್) ಮಾಹಿತಿ ಶೇರ್ ಮಾಡಿಕೊಂಡಿದ್ದು, ಜನವರಿಯಿಂದ 1.62 ಕೋಟಿಗೂ ಹೆಚ್ಚು ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ, ಇದು ಭಾರತದ ಸ್ವಾತಂತ್ರ್ಯದ ಕಳೆದ 75 ವರ್ಷಗಳಲ್ಲಿ ಹಿಂದಿನ ರಾಜ್ಯದಲ್ಲಿ ದಾಖಲಾದ ಅತಿ ಹೆಚ್ಚು ಜನಸಂದಣಿಯಾಗಿದೆ.