ಬೆಂಗಳೂರು: ರಾಜ್ಯದ ವಸತಿ ರಹಿತ ಬಿಪಿಎಲ್ ಕುಟುಂಬದವರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ವಿವಿಧ ವಸತಿ ಯೋಜನೆಗಳ ಸಬ್ಸಿಡಿಯನ್ನು ಎರಡು ಪಟ್ಟು ಹೆಚ್ಚಳ ಮಾಡುವ ಚಿಂತನೆ ನಡೆಸಿದೆ.
ಪರಿಶಿಷ್ಟರು, ಸಾಮಾನ್ಯ ವರ್ಗದವರು ಸೇರಿದಂತೆ ಎಲ್ಲರಿಗೂ ಗ್ರಾಮೀಣ ಪ್ರದೇಶದಲ್ಲಿ 3 ಲಕ್ಷ ರೂಪಾಯಿ ಮತ್ತು ನಗರ ಪ್ರದೇಶದಲ್ಲಿ 4 ಲಕ್ಷ ರೂಪಾಯಿ ಸಹಾಯಧನ ನೀಡಲು ಚಿಂತನೆ ನಡೆದಿದೆ. ಪ್ರಸ್ತುತ ಗ್ರಾಮೀಣ ಭಾಗದಲ್ಲಿ 1.20 ಲಕ್ಷ ರೂ. ಹಾಗೂ ನಗರ ಪ್ರದೇಶದಲ್ಲಿ 2.70 ಲಕ್ಷ ರೂ. ಸಬ್ಸಿಡಿ ನೀಡಲಾಗುತ್ತಿದೆ.
ಹೀಗೆ ವಸತಿ ಯೋಜನೆಗಳ ಸಬ್ಸಿಡಿಯನ್ನು ಗ್ರಾಮೀಣ ಭಾಗದಲ್ಲಿ 1.20 ಲಕ್ಷ ರೂ ನಿಂದ 3 ಲಕ್ಷ ರೂ. ನಗರ ಪ್ರದೇಶದಲ್ಲಿ 2.70 ಲಕ್ಷ ರೂ. ನಿಂದ 4 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗುವುದು.
ಯಾವುದೇ ಮನೆ ನಿರ್ಮಾಣಕ್ಕೆ ಕನಿಷ್ಠ 5 ಲಕ್ಷ ರೂ. ಅಗತ್ಯವಿದೆ. ಸರ್ಕಾರದ ಸಬ್ಸಿಡಿ ಸಾಕಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬಡವರು ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವಸತಿ ಯೋಜನೆಗಳ ಸಬ್ಸಿಡಿ ಮೊತ್ತ ಹೆಚ್ಚಳಕ್ಕೆ ಸರ್ಕಾರ ಕ್ರಮ ಕೈಗೊಂಡಿರುವುದಾಗಿ ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ನಗರ ಪ್ರದೇಶದ ಬಿಪಿಎಲ್ ಕುಟುಂಬಗಳಿಗೆ ಮಂಜೂರಾದ ಮನೆಗಳಿಗೆ ಸಾಮಾನ್ಯ ವರ್ಗದವರಿಗೆ 2.70 ಲಕ್ಷ ರೂ., ಪರಿಶಿಷ್ಟರಿಗೆ 3.50 ಲಕ್ಷ ರೂಪಾಯಿ ಸಬ್ಸಿಡಿ ಇದೆ. ಕೇಂದ್ರ ಸರ್ಕಾರ ಎಲ್ಲಾ ವರ್ಗದ ಫಲಾನುಭವಿಗಳಿಗೆ ಏಕರೂಪದ ಸಬ್ಸಿಡಿ ನೀಡುತ್ತಿದ್ದು, ರಾಜ್ಯದಲ್ಲಿಯೂ ಅದೇ ನಿಯಮ ಪಾಲಿಸಲಾಗುವುದು ಎಂದು ಹೇಳಲಾಗಿದೆ.
ಗ್ರಾಮೀಣ ಪ್ರದೇಶದ ಬಿಪಿಎಲ್ ಕುಟುಂಬದವರಿಗೆ ವಸತಿ ಯೋಜನೆಯಡಿ ಮಂಜೂರಾದ ಮನೆಗಳಿಗೆ ಕೇಂದ್ರ ಸರ್ಕಾರ 72,000 ರೂ., ರಾಜ್ಯ ಸರ್ಕಾರ 48,000 ರೂ. ಸೇರಿ 1.20 ಲಕ್ಷ ರೂ. ಸಹಾಯಧನ ನೀಡುತ್ತಿದೆ. ಈ ಮೊತ್ತವನ್ನು ಎಲ್ಲಾ ವರ್ಗದ ಫಲಾನುಭವಿಗಳಿಗೆ ಸಮಾನಾಗಿ 3 ಲಕ್ಷ ರೂಪಾಯಿಗೆ ಏರಿಕೆ ಮಾಡಲು ಮುಂದಾಗಿದ್ದು ಸರ್ಕಾರವೇ ಹೆಚ್ಚುವರಿ ಮೊತ್ತ ಭರಿಸಲಿದೆ ಎಂದು ಹೇಳಲಾಗಿದೆ.