ಕೊಪ್ಪಳ: ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಪಂಗಡದ ಅಲೆಮಾರಿ, ಅರೆಅಲೆಮಾರಿ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯಗಳಿಗೆ, ದೌರ್ಜನ್ಯ ಸಂತ್ರಸ್ತರಿಗೆ, ಮಾಜಿ ದೇವದಾಸಿಯರಿಗೆ, ಅಂತರ್ಜಾತಿ ವಿವಾಹಿತ ದಂಪತಿಗಳಿಗೆ, ವಿಧವೆಯರು, ಒಂಟಿ ಮಹಿಳೆಯರು, ಮೀನುಗಾರರಿಗೆ, ವಸತಿ ರಹಿತ ನಿವೇಶನ(ಸೈಟ್) ಹೊಂದಿದ ಫಲಾಪೇಕ್ಷಿಗಳಿಗೆ ಮನೆ ನಿರ್ಮಿಸಿ ಕೊಡಲು ಮನೆ ನಿರ್ಮಾಣ ಯೋಜನೆಯಡಿಯಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಫ್ ಲೈನ್ ಅರ್ಜಿಯನ್ನು ಸಲ್ಲಿಸುವವರು ನಿಗಮದ ಆಯಾ ಜಿಲ್ಲಾ ಕಛೇರಿಗಳಲ್ಲಿ ಅರ್ಜಿ ನಮೂನೆಯನ್ನು ಪಡೆದು ಫೆಬ್ರವರಿ 25 ರೊಳಗೆ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಬೇಕು. ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಫೆ. 7 ರಿಂದ ಆರಂಭವಾಗಲಿದ್ದು, ಆನ್ ಲೈನ್ ಅರ್ಜಿ ಸಲ್ಲಿಸಲು ಫೆ.28 ಕೊನೆಯ ದಿನವಾಗಿದೆ.
ಫಲಾನುಭವಿಗಳು ಅರ್ಜಿಯೊಂದಿಗೆ ಇತ್ತೀಚಿನ ಪಾಸ್ ಫೋರ್ಟ್ ಅಳತೆಯ ಭಾವಚಿತ್ರ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್, ನಿರಾಪೇಕ್ಷಣಾ ಪತ್ರ, ಖಾತೆ, ಸೈಟ್/ನಿವೇಶನಕ್ಕೆ ಸಂಬಂಧಪಟ್ಟ ದಾಖಲಾತಿಗಳನ್ನು ಸಲ್ಲಿಸಬೇಕು.
18 ವರ್ಷ ಮೇಲ್ಪಟ್ಟ ಪರಿಶಿಷ್ಟ ಪಂಗಡದ ಅಲೆಮಾರಿ ಸಮುದಾಯಕ್ಕೆ ಸೇರಿದ, ಕನಿಷ್ಟ 15 ವರ್ಷದಿಂದ ಕರ್ನಾಟಕದಲ್ಲಿಯೇ ನೆಲೆಸಿರುವ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಚೇರಿ, ನಿಗಮದ ವೆಬ್‌ಸೈಟ್: www.karnataka.gov.in/kmvstdcl ದೂ.ಸಂ: 08539-221176 ಗೆ ಸಂಪರ್ಕಿಸಬಹುದು ಎಂದು ನಿಗಮದ ಕೊಪ್ಪಳ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.