ಅದೃಷ್ಟ ಅನ್ನೋದು ಎಲ್ಲರಿಗೂ ಒಲಿಯುವುದಿಲ್ಲ. ಯಾರಿಗೆ ಯಾವಾಗ ಒಲಿಯುತ್ತದೆ ಅದೂ ತಿಳಿದಿಲ್ಲ. ಆದರೆ ಅದೃಷ್ಟ ಅಂದ್ರೆ ಹೀಗಿರಬೇಕು ಎನ್ನುವಂತಹ ಘಟನೆ ಕೇರಳದಲ್ಲಿ ನಡೆದಿದೆ. 72 ವರ್ಷದ ಸದಾನಂದನ್ ಅವರು ಕ್ರಿಸ್‌ಮಸ್-ಹೊಸ ವರ್ಷದ ಬಂಪರ್ ಲಾಟರಿ ಟಿಕೆಟ್ ಅನ್ನು ಬೆಳಿಗ್ಗೆ 9:30 ಕ್ಕೆ 300 ರೂ. ಕೊಟ್ಟು ಖರೀದಿಸಿದಾಗ, ಇದರಿಂದ ಅವ್ರ ಜೀವನಕ್ಕೆ ಲಕ್ಷ್ಮಿ ಕಟಾಕ್ಷ ಆಗುತ್ತದೆ ಎಂದು ಅವರಿಗೆ ತಿಳಿದಿರಲಿಲ್ಲ. ಅದೃಷ್ಟ ಅವರಿಗೆ ಆಶ್ಚರ್ಯ ನೀಡಿದ್ರೂ ಅದು ಆಹ್ಲಾದಕರವಾಗಿದೆ.
ಸದಾನಂದನ್ ಟಿಕೆಟ್ ಖರೀದಿಸಿದ ಕೇವಲ 5 ಗಂಟೆಗಳ ನಂತರ, ಮಧ್ಯಾಹ್ನ 3 ಗಂಟೆಗೆ ಲಾಟರಿ ಟಿಕೆಟ್ ಗಳ ಡ್ರಾ ಘೋಷಿಸಲಾಯ್ತು. ಇದ್ರಲ್ಲಿ ಸದಾನಂದನ್ ಖರೀದಿಸಿದ ಲಾಟರಿ ಟಿಕೆಟ್ ಗೆ ಮೊದಲ ಬಹುಮಾನ ಒಲಿಯಿತು. ಐದೇ ಗಂಟೆಗಳಲ್ಲಿ ಸದಾನಂದನ್ 12 ಕೋಟಿ ರೂಪಾಯಿಗಳನ್ನು ಗೆದ್ದರು. ಈ ಮೂಲಕ 50 ವರ್ಷಗಳ ಕಾಲ ಪೇಂಟರ್ ಆಗಿಯೇ ಸಾಮಾನ್ಯ ಜೀವನ ನಡೆಸುತ್ತಿರುವ ಸದಾನಂದನ್ ಅವರ ಅದೃಷ್ಟದ ಬಾಗಿಲು ತೆರೆದಿದೆ.
ಮಾಂಸ ಖರೀದಿಸಲು ಹೋಗಿದ್ದಾಗ ಅವರ ಸ್ನೇಹಿತ, ಲಾಟರಿ ಏಜೆಂಟ್ ಸೆಲ್ವಕುಮಾರ್ ಓಡಿ ಬಂದು ಸದಾನಂದನ್ ಅವ್ರಿಗೆ ಎಕ್ಸ್‌ಜಿ 218582 ನಂಬರಿನ ಅದೃಷ್ಟದ ಟಿಕೆಟ್ ಮಾರಾಟ ಮಾಡಿದ್ದಾರೆ. ಆದ್ರೆ ಇಬ್ಬರಿಗೂ ಲಾಟರಿಯಿಂದ ನಾವು ಕೋಟ್ಯಾಧಿಪತಿಗಳಾಗುತ್ತಿವೆ ಎಂದು ತಿಳಿದಿರಲಿಲ್ಲ. ಟ್ಯಾಕ್ಸ್ ಮತ್ತು ಏಜೆಂಟ್ ಕಮೀಷನ್ ಕಡಿತವಾಗಿ ಸದಾನಂದನ್ ಅವ್ರಿಗೆ 7.39 ಕೋಟಿ ರೂ. ಅಷ್ಟು ಲಾಟರಿ ಹಣ ದೊರೆಯಲಿದೆ. ಐಮನಂನಲ್ಲಿರುವ ಎಸ್.ಬಿ.ಐ. ಶಾಖೆಯಿಂದ ಸದಾನಂದನ್ ಹಣ ಸ್ವೀಕರಿಸಲಿದ್ದಾರೆ ಎಂದು ವರದಿಯಾಗಿದೆ.
ಮುದ್ರಿಸಲಾದ ಒಟ್ಟು 47,40,000 ಬಂಪರ್ ಟಿಕೆಟ್‌ಗಳಲ್ಲಿ 47,36,528 ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿದೆ. ಇವುಗಳಲ್ಲಿ 40 ಅನ್ನು ತಿರುನಕ್ಕರದ ಶ್ರೀ ಕೃಷ್ಣ ಲಕ್ಕಿ ಸೆಂಟರ್‌ನಿಂದ ಸೆಲ್ವಕುಮಾರ್ ಖರೀದಿಸಿದ್ದಾರೆ. ದ್ವಿತೀಯ ಬಹುಮಾನ 3 ಕೋಟಿ ರೂ., ತೃತೀಯ ಬಹುಮಾನ 60 ಲಕ್ಷ ರೂ. ಎರಡನೇ ಬಹುಮಾನವನ್ನು 6 ಟಿಕೆಟ್‌ಗಳಿಗೆ ಮತ್ತು ಮೂರನೇ ಬಹುಮಾನವನ್ನು 6 ಟಿಕೆಟ್‌ಗಳಿಗೆ ವಿತರಿಸಲಾಗಿದೆ.
ರಾಜ್ಯ ಸರ್ಕಾರದ ಸಮ್ಮುಖದಲ್ಲಿ ತಿರುವನಂತಪುರದಲ್ಲಿ ಡ್ರಾ ನಡೆಸಲಾಯಿತು ಎಂದು ಕೇರಳ ರಾಜ್ಯ ಲಾಟರಿ ಇಲಾಖೆ ತಿಳಿಸಿದೆ. ಸದಾನಂದನ್ ಹಣದಲ್ಲಿ ತನ್ನ ಮನೆಯನ್ನು ನವೀಕರಿಸಲು, ತಮ್ಮ ಮಕ್ಕಳಾದ ಸಂಜಯ್ ಸದನ್ ಮತ್ತು ಸನೀಶ್ ಸದನ್ ಅವರ ಜೀವನವನ್ನ ಉತ್ತಮಗೊಳಿಸಲು ಯೋಜಿಸಿದ್ದಾರೆ ಎಂದು ತಿಳಿದುಬಂದಿದೆ.