ಮನೆಯ ಟೆರಾಸಿನಲ್ಲಿ ಮೊಬೈಲ್ ಟವರ್ ಹಾಕಿಸುತ್ತೇವೆ ಎಂದು ನಂಬಿಸಿ ಮನೆ ಮಾಲೀಕನಿಂದ 2.34 ಲಕ್ಷ ರೂಪಾಯಿ ಪೀಕಿದ ಘಟನೆ ಬೆಂಗಳೂರು ಪಶ್ಚಿಮ ವಲಯದಲ್ಲಿ ನಡೆದಿದೆ. ಟವರ್ ಅಳವಡಿಸಲು ಟೆರಾಸಿನಲ್ಲಿ ಜಾಗ ನೀಡಿದರೆ 60 ಲಕ್ಷ ರೂಪಾಯಿ ಡೆಪಾಸಿಟ್ ಹಾಗೂ 50 ಸಾವಿರ ರೂಪಾಯಿ ಬಾಡಿಗೆ ನೀಡೋದಾಗಿ ನಂಬಿಸಿ ದುಷ್ಕರ್ಮಿಗಳು ಉಂಡೆನಾಮ ಹಾಕಿದ್ದಾರೆ.
ನಾಯಂಡಳ್ಳಿ, ಮೆಟ್ರೋ ಬಡಾವಣೆ ನಿವಾಸಿಯಾಗಿದ್ದ 49 ವರ್ಷದ ಎನ್.ಎಸ್. ನರಸರಾಜು ಎಂಬವರು ಚಂದ್ರ ಲೇಔಟ್ ಠಾಣೆಯಲ್ಲಿ ಈ ಸಂಬಂಧ ದೂರನ್ನು ನೀಡಿದ್ದಾರೆ. ಆರೋಪಿಗಳ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜೂನ್ 18ರಂದು ನರಸರಾಜು ಮೊಬೈಲ್ ಗೆ ಕರೆಯೊಂದು ಬಂದಿತ್ತು. ತನ್ನನ್ನು ನಾನು ಭಾಗ್ಯ ಎಂದು ಪರಿಚಯ ಮಾಡಿಕೊಂಡ ಮಹಿಳೆ ಟೆರಾಸಿನಲ್ಲಿ ಟವರ್ ಅಳವಡಿಸುತ್ತೇವೆ ಎಂದು ಮನವಿ ಮಾಡಿದ್ದಾರೆ. ಅಲ್ಲದೇ ಪ್ರತಿ ತಿಂಗಳು 50 ಸಾವಿರ ರೂಪಾಯಿ ಬಾಡಿಗೆ ಹಣ ಹಾಗೂ 60 ಲಕ್ಷ ರೂಪಾಯಿ ಡೆಪಾಸಿಟ್ ಇಡುತ್ತೇವೆ ಎಂದು ಹೇಳಿದ್ದಾಳೆ. ಮೊದಲ ಹಂತದಲ್ಲಿ 30 ಲಕ್ಷ ರೂಪಾಯಿ ಪಾವತಿ ಮಾಡಿ ಟವರ್ ಅಳವಡಿಸಿದ ಬಳಿಕ ಇನ್ನುಳಿದ 30 ಲಕ್ಷ ರೂಪಾಯಿ ನೀಡುತ್ತೇವೆ ಎಂದು ನರಸರಾಜುರನ್ನ ನಂಬಿಸಿದ್ದಳು.
ಜೂನ್ 22ರಂದು ನರಸರಾಜುಗೆ ಮತ್ತೊಮ್ಮೆ ಕರೆ ಮಾಡಿದ ಈಕೆ ಕಾಗದ ಪತ್ರ ವ್ಯವಹಾರಕ್ಕಾಗಿ 1100 ರೂಪಾಯಿ ಪಾವತಿಸುವಂತೆ ಹೇಳಿದ್ದಾಳೆ. ಇದಕ್ಕಾಗಿ ಬ್ಯಾಂಕಿಂಗ್ ವಿವರವನ್ನೂ ನೀಡಿದ್ದಾಳೆ. ಹಿಂದುಮುಂದು ಯೋಚಿಸದ ನರಸರಾಜು ಹಣ ವರ್ಗಾವಣೆ ಮಾಡಿದ್ರು.
ಜುಲೈ 14ರಂದು ಸೋಮಶೇಖರ್ ಎಂದು ಹೇಳಿಕೊಂಡು ಮತ್ತೊಬ್ಬ ವ್ಯಕ್ತಿ ನರಸರಾಜುಗೆ ಕರೆ ಮಾಡಿದ್ದ. ಈತ ಟವರ್ ಲೈಸೆನ್ಸ್ಗಾಗಿ 36,900 ರೂಪಾಯಿ ಪಾವತಿ ಮಾಡುವಂತೆ ನರಸರಾಜುಗೆ ಹೇಳಿದ್ದಾನೆ. ಈ ಹಣವನ್ನೂ ನರಸರಾಜು ಪಾವತಿ ಮಾಡಿದ್ದರು. ಇದಾದ ಬಳಿಕ ಮತ್ತೊಮ್ಮೆ ಕರೆ ಮಾಡಿದ ಸೋಮಶೇಖರ್, ಇಂಜಿನಿಯರ್ ಹಾಗೂ ಇತರೆ ಖರ್ಚಿಗಾಗಿ 76, 000 ರೂಪಾಯಿ ನೀಡುವಂತೆ ಹೇಳಿದ್ದಾರೆ. ಇದನ್ನೂ ಕೂಡ ನರಸರಾಜು ಪಾವತಿಸಿದ್ದರು.
ಇದಾದ ಮಾರನೇ ದಿನ ಸೌಮ್ಯ ಎಂಬ ಹೆಸರಲ್ಲಿ ಕರೆ ಮಾಡಿದ ಮಹಿಳೆ 30 ಲಕ್ಷ ರೂಪಾಯಿಗೆ 4 ಪ್ರತಿಶತ ಜಿಎಸ್ಟಿ ಪಾವತಿ ಮಾಡುವಂತೆ ಹೇಳಿದ್ದಾಳೆ. ಅದರಂತೆ ನರಸರಾಜು 1.20 ಲಕ್ಷ ರೂಪಾಯಿ ಪಾವತಿ ಮಾಡಿದ್ದರು. ಇಲ್ಲಿಗೆ ಐನಾತಿಗಳು ನರಸರಾಜುರನ್ನ ಸುಮ್ಮನೇ ಬಿಡಲಿಲ್ಲ. ವಿವಿಧ ಕಾರಣಗಳನ್ನು ನೀಡಿ ನರಸರಾಜು ಬಳಿ ಹಣ ಕೇಳುತ್ತಲೇ ಇದ್ದರು. ಇದರಿಂದ ಅನುಮಾನಗೊಂಡ ನರಸರಾಜು ತಮ್ಮ ಸ್ನೇಹಿತರು ಹಾಗೂ ಆಪ್ತರ ಬಳಿ ಈ ವಿಚಾರವನ್ನು ಹೇಳಿಕೊಂಡಿದ್ದಾರೆ. ಆಗ ಅವರಿಗೆ ತಾನು ಮೋಸಕ್ಕೊಳಗಾಗಿದ್ದೇನೆ ಎಂದು ವಿಚಾರ ತಿಳಿದಿದೆ.