ಬೆಂಗಳೂರು: ಕೊರೊನಾ ಸೋಂಕು ತಡೆಗೆ ಲಾಕ್ಡೌನ್ ಜಾರಿ ಮಾಡಿದ ಪರಿಣಾಮ ಸಂಕಷ್ಟದಲ್ಲಿರುವ ಗ್ರಾಮೀಣ ಪ್ರದೇಶದ ಜನರ ಮನೆ ಬಾಗಿಲಿಗೆ ಊಟ ತಲುಪಿಸಲು ಸರ್ಕಾರ ಮುಂದಾಗಿದೆ.
ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಆದಾಯ ಕಳೆದುಕೊಂಡಿದ್ದಾರೆ. ನಗರ ಪ್ರದೇಶದ ಬಡ ಜನರಿಗೆ ಇಂದಿರಾ ಕ್ಯಾಂಟೀನ್ ಮೂಲಕ ಉಚಿತವಾಗಿ ಆಹಾರ ಭದ್ರತೆ ಒದಗಿಸಲಾಗಿದೆ. ಅದೇ ರೀತಿ, ಗ್ರಾಮಾಂತರ ಪ್ರದೇಶದಲ್ಲಿನ ದುರ್ಬಲರು, ನಿರ್ಗತಿಕರಿಗೆ ಗ್ರಾಮ ಪಂಚಾಯಿತಿಗಳ ಮೂಲಕ ಆಹಾರ ಭದ್ರತೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಯೋಜನೆ ರೂಪಿಸಲಾಗಿದ್ದು, ಗ್ರಾಮಾಂತರ ಪ್ರದೇಶದಲ್ಲಿರುವ ನಿರ್ಗತಿಕರು, ದುರ್ಬಲರನ್ನು ಗುರುತಿಸಿ ಅವರಿಗೆ ತಯಾರಿಸಿದ ಆಹಾರದ ಪೊಟ್ಟಣಗಳನ್ನು ವಿತರಿಸಲಾಗುತ್ತಿದೆ.
ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 150 ಆಹಾರ ಪೊಟ್ಟಣ ಸಿದ್ಧಪಡಿಸಿ ವಿತರಣೆ ಮಾಡಲಾಗುವುದು. ಹಣಕಾಸಿನ ವ್ಯವಸ್ಥೆಯನ್ನು ಗ್ರಾಮಪಂಚಾಯಿತಿಗಳು ಮಾಡಿಕೊಳ್ಳಬೇಕಿದೆ. ಸ್ವಸಹಾಯ ಗುಂಪುಗಳ ನೆರವಿನಿಂದ ಆಹಾರ ಪೊಟ್ಟಣ ವಿತರಿಸಬಹುದು. ಅಡುಗೆ ತಯಾರಿಸಲು ಬಿಸಿಯೂಟ ತಯಾರಿಸುವ ಸಿಬ್ಬಂದಿಯ ಸಹಾಯ ಪಡೆದುಕೊಳ್ಳಬಹುದು ಎಂದು ಸೂಚನೆ ನೀಡಲಾಗಿದೆ.
150 ಪೊಟ್ಟಣಗಳಿಗಿಂತ ಹೆಚ್ಚಿನ ಪೊಟ್ಟಣ ಬೇಕಾದಲ್ಲಿ 15 ನೇ ಹಣಕಾಸು ಆಯೋಗದ ಅನುದಾನ ಅಥವಾ ಸ್ವಂತ ಸಂಪನ್ಮೂಲಗಳಿಂದ ಭರಿಸುವಂತೆ ಗ್ರಾಮಪಂಚಾಯಿತಿಗಳಿಗೆ ತಿಳಿಸಲಾಗಿದ್ದು, ಹಳ್ಳಿಗಳಲ್ಲಿರುವ ನಿರ್ಗತಿಕರಿಗೆ ಆಹಾರ ಭದ್ರತೆ ಒದಗಿಸಲಾಗುವುದು ಎನ್ನಲಾಗಿದೆ.