ಬೆಂಗಳೂರು: ಬಹುನಿರೀಕ್ಷಿತ ವಸತಿ ಯೋಜನೆಗೆ ಕೊನೆಗೂ ಗ್ರೀನ್ ಸಿಗ್ನಲ್ ಸಿಕ್ಕಿದ್ದು, 5 ಲಕ್ಷ ಮನೆಗಳ ನಿರ್ಮಾಣಕ್ಕೆ ಸರ್ಕಾರ ಅಸ್ತು ಎಂದಿದೆ.
ವಾಜಪೇಯಿ ನಗರ ವಸತಿ ಯೋಜನೆ ಮತ್ತು ಅಂಬೇಡ್ಕರ್ ನಿವಾಸ್ ಯೋಜನೆಯಡಿ ನಗರ ಪ್ರದೇಶದಲ್ಲಿ ಒಂದು ಲಕ್ಷ ಮನೆಗಳನ್ನು ನಿರ್ಮಿಸಲಾಗುತ್ತದೆ.
ರಾಜ್ಯಾದ್ಯಂತ 5 ಲಕ್ಷ ಮನೆಗಳ ನಿರ್ಮಾಣ ಮಾಡಲಿದ್ದು, 4 ಲಕ್ಷ ಮನೆಗಳನ್ನು ಗ್ರಾಮೀಣ ಪ್ರದೇಶಕ್ಕೆ ಮೀಸಲಿಡಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯಾ ಗ್ರಾಮ ಪಂಚಾಯಿತಿ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಮನೆಗಳನ್ನು ಮಂಜೂರು ಮಾಡಲಾಗುವುದು.
25 ಮತ್ತು ಅದಕ್ಕಿಂತ ಹೆಚ್ಚು ಸದಸ್ಯರಿರುವ ಗ್ರಾಮ ಪಂಚಾಯಿತಿಗಳಿಗೆ ತಲಾ 50 ಮನೆ ನೀಡಲಾಗುತ್ತದೆ. 15 ಮತ್ತು ಅದಕ್ಕಿಂತ ಹೆಚ್ಚು ಸದಸ್ಯರಿರುವ ಪಂಚಾಯಿತಿಗಳಿಗೆ, 25 ಕ್ಕಿಂತ ಕಡಿಮೆ ಸದಸ್ಯರು ಇರುವ ಪಂಚಾಯಿತಿಗಳಿಗೆ 40 ಮನೆ ನೀಡಲಾಗುತ್ತದೆ. 15 ಕ್ಕಿಂತಲೂ ಕಡಿಮೆ ಸದಸ್ಯರು ಇರುವ ಪಂಚಾಯತಿಗಳಿಗೆ 30 ಮನೆಗಳನ್ನು ನೀಡಲಾಗುತ್ತದೆ. ಅಂಬೇಡ್ಕರ್ ನಿವಾಸ್ ಯೋಜನೆಯಡಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ 53,190 ಮನೆ ನೀಡಲಾಗುತ್ತದೆ.
ಗ್ರಾಮೀಣ ಪ್ರದೇಶದಲ್ಲಿ ಬಸವ ವಸತಿ ಯೋಜನೆಯಡಿ 3.55 ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಿದ್ದು, ಅಂಬೇಡ್ಕರ್ ವಸತಿ ಯೋಜನೆಯಡಿ 50 ಸಾವಿರಗಳ ಮನೆ ಮನೆ ನಿರ್ಮಾಣ ಮಾಡಲಾಗುವುದು. ನಗರ ಪ್ರದೇಶದಲ್ಲಿ ವಾಜಪೇಯಿ ನಗರ ವಸತಿ ಯೋಜನೆಯಡಿ 50 ಸಾವಿರ, ಅಂಬೇಡ್ಕರ್ ವಸತಿ ಯೋಜನೆಯಡಿ 25 ಸಾವಿರ, ದೇವರಾಜ ಅರಸು ವಸತಿ ಯೋಜನೆಯಡಿ 25 ಸಾವಿರ ಮನೆಗಳ ನಿರ್ಮಾಣ ಮಾಡಲಾಗುವುದು ಎಂದು ಹೇಳಲಾಗಿದೆ.