ಬೆಂಗಳೂರು: ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿಯಲ್ಲಿ ಮನೆ ಬಿದ್ದು 7 ಜನ ಸಾವನ್ನಪ್ಪಿರುವ ಪ್ರಕರಣದಲ್ಲಿ ಬದುಕುಳಿದ ವ್ಯಕ್ತಿ ಭೀಮಪ್ಪ ಎಂದು ಗುರುತಿಸಲಾಗಿದೆ.
ಭೀಮಪ್ಪನ ಜೊತೆ ದೂರವಾಣಿ ಮೂಲಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸರ್ಕಾರ ನಿನ್ನ ಜೊತೆಗಿರುತ್ತದೆ. ಮೃತಪಟ್ಟಿರುವವರ ಅಂತ್ಯಸಂಸ್ಕಾರಕ್ಕೆ ಎಲ್ಲ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ತಕ್ಷಣವೇ ಪರಿಹಾರದ ಹಣವನ್ನು ತಲುಪಿಸಲಾಗುವುದು. ಸರ್ಕಾರ ನಿನ್ನ ಜೊತೆ ಇರುತ್ತದೆ. ಧೈರ್ಯವಾಗಿರು. ಯಾವುದೇ ಕಾರಣಕ್ಕೂ ದೃತಿಗೆಡಬೇಡ ಎಂದು ಅಭಯ ನೀಡಿದರು.
ಮನೆ ಕುಸಿತದಲ್ಲಿ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ದುರಂತಕ್ಕೆ ಆಘಾತ ವ್ಯಕ್ತಪಡಿಸಿರುವ ಅವರು, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರೊಂದಿಗೆ ದೂರವಾಣಿ ಕರೆಮಾಡಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳಲು ಸಲಹೆ ನೀಡಿದ್ದಾರೆ.