ಮಡಿಕೇರಿ: ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯಗಳ ಫಲಾಪೇಕ್ಷಿಗಳಿಂದ ವಸತಿ ರಹಿತ ನಿವೇಶನ(ಸೈಟ್) ಹೊಂದಿದ ಫಲಾಪೇಕ್ಷಿಗಳಿಗೆ ಮನೆ ನಿರ್ಮಿಸಿ ಕೊಡಲು ಮನೆ(ವಸತಿ) ನಿರ್ಮಾಣ ಯೋಜನೆಯಡಿಯಲ್ಲಿ ಫಲಾಪೇಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಫಲಾಪೇಕ್ಷಿಗಳಿಗೆ ಆನ್‍ಲೈನ್/ ಆಫ್‍ಲೈನ್ ಮೂಲಕ ಅರ್ಜಿ ಮತ್ತು ದಾಖಲಾತಿಗಳನ್ನು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವೆಬ್‍ಸೈಟ್ www.adcl.karnataka.gov.in ಮೂಲಕ ಸಲ್ಲಿಸಬಹುದು. ಅಥವಾ ಅರ್ಜಿಯ ನಮೂನೆಯನ್ನು ಡೌನ್‍ಲೋಡ್ ಮಾಡಿಕೊಂಡು ಅಗತ್ಯ ದಾಖಲಾತಿಗಳೊಂದಿಗೆ ಜಿಲ್ಲಾ ಕಚೇರಿಗೆ ಸಲ್ಲಿಸಬಹುದು. ಆಫ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಫಲಾಪೇಕ್ಷಿಗಳು ಜಿಲ್ಲಾ ಕಚೇರಿಯನ್ನು ಸಂಪರ್ಕಿಸಿ ಅರ್ಜಿ ಪಡೆಯಬಹುದು.
ಆನ್‍ಲೈನ್ ಮತ್ತು ಆಫ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಫೆಬ್ರವರಿ, 28 ಕೊನೆಯ ದಿನವಾಗಿದೆ. ಅರ್ಜಿದಾರರು ಪರಿಶಿಷ್ಟ ಜಾತಿಯ ಅಲೆಮಾರಿ ಸಮುದಾಯಕ್ಕೆ ಸೇರಿದವರಾಗಿರಬೇಕು. ಕಳೆದ ಕನಿಷ್ಠ 15 ವರ್ಷಗಳಿಂದ ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. 18 ವರ್ಷ ಮೇಲ್ಪಟ್ಟವರಾಗಿರಬೇಕು. ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶವಾದಲ್ಲಿ ರೂ.98 ಸಾವಿರ ಹಾಗೂ ನಗರ ಪ್ರದೇಶವಾದಲ್ಲಿ 1,20,000 ರೂ.ಮಿತಿಯೊಳಗಿರಬೇಕು. ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ, ಅರೆ ಸರ್ಕಾರ ಸಂಸ್ಥೆಯಲ್ಲಿ ನೌಕರಿಯಲ್ಲಿರಬಾರದು.
ಜಿಲ್ಲೆಯಲ್ಲಿ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಈಗಾಗಲೇ ನೋಂದಣಿ ಮಾಡಿಕೊಂಡಿರುವ ಪರಿಶಿಷ್ಟ ಜಾತಿಯ ಅಂಗವಿಕಲ ಫಲಾನುಭವಿಗಳ ಲಭ್ಯವಿರುವ ಪಟ್ಟಿಯಿಂದ ಅಂಗವಿಕಲರನ್ನು ನೇರವಾಗಿ ಸಂದರ್ಶನ ಮಾಡಿ ಶೇ.5 ರಷ್ಟು ಮೀಸಲಾತಿಯನ್ನು ನೀಡಿ ಸೌಲಭ್ಯ ಕಲ್ಪಿಸಲಾಗುವುದು.
ಅರ್ಜಿಯೊಂದಿಗೆ ಇತ್ತೀಚಿನ ಪಾಸ್‍ಪೋರ್ಟ್ ಅಳತೆಯ ಭಾವ ಚಿತ್ರ, ಜಾತಿ ಪ್ರಮಾಣ ಪತ್ರ, ಕುಟುಂಬದ ವಾರ್ಷಿಕ ವರಮಾನ ಪತ್ರ, ಪಡಿತರ ಚೀಟಿ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಅರ್ಜಿದಾರರು ಹೊಂದಿರುವ ಬ್ಯಾಂಕ್ ಉಳಿತಾಯ ಖಾತೆಯ ವಿವರಗಳನ್ನೊಳಗೊಂಡ ಪಾಸ್ ಪುಸ್ತಕದ ಮೊದಲ ಪುಟದ ಪ್ರತಿ. ನಿರಾಪೇಕ್ಷಣಾ ಪತ್ರ, ಖಾತೆ, ಸೈಟ್, ನಿವೇಶನಕ್ಕೆ ಸಂಬಂಧಪಟ್ಟ ದಾಖಲಾತಿಗಳನ್ನು ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕರು, ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯಗಳ ಅಭಿವೃದ್ಧಿ ಕೋಶ, ಮಡಿಕೇರಿ, ಕೊಡಗು ಜಿಲ್ಲಾ ಕಚೇರಿಯನ್ನು ಹಾಗೂ ನಿಗಮದ ವೆಬ್‍ಸೈಟ್ www.adcl.karnataka.gov.in ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.