ಚಿತ್ರದುರ್ಗ: ವಸತಿ ಯೋಜನೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಿಸಿದ ವಿಜಿಲ್ ಆಪ್ ಅನ್ನು ತಾತ್ಕಾಲಿಕವಾಗಿ ಹಿಂಪಡೆಯಲು ಆದೇಶಿಸಲಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ಜಿಪಿಎಸ್ ಆಧರಿಸಿ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಂತ್ರಿಕ ಸಮಸ್ಯೆಯ ಬಗ್ಗೆ ಫಲಾನುಭವಿಗಳಿಂದ ದೂರು ಬರುತ್ತಿವೆ. ಸಕಾಲಕ್ಕೆ ಹಣ ಬಿಡುಗಡೆಯಾಗದ ಕಾರಣ ಯೋಜನೆಗೆ ವಿಳಂಬವಾಗುತ್ತಿರುವ ಬಗ್ಗೆಯೂ ದೂರು ಬಂದಿದೆ. ಈ ಹಿನ್ನೆಲೆಯಲ್ಲಿ ಮೂರು ತಿಂಗಳು ವಿಜಿಲ್ ಆಪ್ ಹಿಂಪಡೆಯಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ನಾನಾ ವಸತಿ ಯೋಜನೆಗಳ ಮೂಲಕ 6 ಲಕ್ಷ ಮನೆಗಳಿಗೆ ಜಿಪಿಎಸ್ ಆಧರಿಸಿ ಹಣ ಬಿಡುಗಡೆ ಮಾಡಲಾಗುತ್ತಿದೆ. ಕಳೆದ ಬಜೆಟ್ನಲ್ಲಿ ಮಂಜೂರಾದ ಅನುದಾನದಲ್ಲಿ ಶೇಕಡ 62 ರಷ್ಟು ಖರ್ಚಾಗಿದ್ದು, ಉಳಿದ ಅನುದಾನ ಮಾಡಿಕೊಳ್ಳಲು ಎಲ್ಲ ಶಾಸಕರು, ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಒಗಳಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದ್ದಾರೆ.