ಕೊಪ್ಪಳ: ಪಿಎಂ ಆವಾಸ್ ಯೋಜನೆಯಡಿ ಫಲಾನುಭವಿಗಳ ವಂತಿಕೆಯನ್ನು ಸರ್ಕಾರದಿಂದಲೇ ಭರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಕರ್ನಾಟಕ ಸರ್ಕಾರದ ವಸತಿ ಇಲಾಖೆ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಗರದ ಸಜ್ಜಿಹೊಲ ಓಣಿಯಲ್ಲಿ ಶುಕ್ರವಾರದಂದು ಆಯೋಜಿಸಲಾಗಿದ್ದ ಕೊಪ್ಪಳ ನಗರದ ಕೊಳಗೇರಿ ಪ್ರದೇಶದ ನಿವಾಸಿಗಳಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 402 ಮನೆಗಳ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ, ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೊಳಗೇರಿ ನಿವಾಸಿಗಳಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 402 ಮನೆಗಳ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದು, ಇದರಲ್ಲಿ ಫಲಾನುಭಿಗಳ ವಂತಿಕೆ, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸೌಲಭ್ಯ, ಬ್ಯಾಂಕ್ ಸಾಲ ಸೌಲಭ್ಯವಿದೆ. ಇದಕ್ಕೆ ಬ್ಯಾಂಕಿನವರು ಸರಿಯಾದ ರೀತಿಯಲ್ಲಿ ಸ್ಪಂದಿಸುವುದಿಲ್ಲ ಎಂಬ ದೂರುಗಳು ಬರುತ್ತವೆ. ಈ ನಿಟ್ಟಿನಲ್ಲಿ ಡಿಸಿ ಹಾಗೂ ಸಿಇಓ ರವರು ಸಂಬಂಧಪಟ್ಟ ಬ್ಯಾಂಕುಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಅಲ್ಲದೆ ಈ ಯೋಜನೆಯಡಿ ಬ್ಯಾಂಕ್ ಸಾಲಕ್ಕೆ ಶೇ. 6ರಷ್ಟು ಬಡ್ಡಿದರವಿದ್ದು, ಇದರಿಂದ ಆರ್ಥಿಕವಾಗಿ ಹಿಂದುಳಿದವರಿಗೆ ಕಷ್ಟವಾಗುತ್ತದೆ. ಬಡ್ಡಿ ರಹಿತ ಸಾಲ ನೀಡುವ ದಿಶೆಯಲ್ಲಿ ಮುಖ್ಯ ಮಂತ್ರಿಗಳ ಗಮನಕ್ಕೆ ತಂದು ಅಗತ್ಯ ಕ್ರಮಕ್ಕೆ ಸಹಕರಿಸಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಮಾತನಾಡಿ, ಫಲಾನುಭವಿಗಳ ವಂತಿಕೆ ಹಣ ಸರ್ಕಾರದಿಂದ ಭರಿಸಲು ಸಚಿವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿಸಲ್ಲಿಸುತ್ತೇನೆ. ಫಲಾನುಭವಿಗಳು ಮುಂದೆ ನಿಂತು ತಮ್ಮ ಮನೆಗಳನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಸಂಸದ ಕರಡಿ ಸಂಗಣ್ಣ, ನಗರಸಭೆ ಉಪಾಧ್ಯಕ್ಷೆ ಜರೀನಾಬೇಗಂ ಅರಗಂಜಿ, ಸದಸ್ಯರಾದ ಸಿದ್ದು ಮ್ಯಾಗೇರಿ, ಅಮ್ಜದ್ ಪಟೇಲ್, ಮುತ್ತುರಾಜ್ ಕುಷ್ಟಗಿ, ಅಕ್ಬರಪಾಶಾ ಪಲ್ಟನ್, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಫೌಜಿಯಾ ತರನ್ನುಮ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಗಂಗಪ್ಪ ಮೊದಲಾದವರಿದ್ದರು.