ಲಂಚ ಪಡೆಯುವಾಗ ಸಿಬಿಐ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಹಿರಿಯ ಅಧಿಕಾರಿಯೊಬ್ಬರು ವಿಚಾರಣೆ ಎದುರಿಸಬೇಕೆಂಬ ಭಯದಿಂದ ಸಿಬಿಐ ಕಚೇರಿಯ 4ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುಜರಾತಿನ ರಾಜ್ ಕೋಟ್ ನಲ್ಲಿ ನಡೆದಿದೆ.
ರಾಜ್ ಕೋಟ್ ನ ವಿದೇಶಿ ವ್ಯಾಪಾರ ಮಹಾ ನಿರ್ದೇಶನಾಲಯದ ಜಂಟಿ ನಿರ್ದೇಶಕ ಜವಾರಿಮಲ್ ಬಿಷ್ಣೋಯಿ ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿಯಾಗಿದ್ದು, ಫುಡ್ ಕ್ಯಾನ್ ರಫ್ತು ಉದ್ಯಮದಲ್ಲಿದ್ದ ವ್ಯಕ್ತಿಯೊಬ್ಬರಿಗೆ ಅನುಮತಿ ನೀಡಲು ಇವರು 9 ಲಕ್ಷ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದು, ಮೊದಲ ಹಂತದಲ್ಲಿ 5 ಲಕ್ಷ ನೀಡುವಂತೆ ತಾಕೀತು ಮಾಡಿದ್ದರು.
ಅದರಂತೆ ಶುಕ್ರವಾರದಂದು 5 ಲಕ್ಷ ರೂಪಾಯಿ ಸ್ವೀಕರಿಸುವಾಗ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು. ಬಳಿಕ ಬಿಷ್ಣೋಯಿ ಅವರ ಕಚೇರಿ ಹಾಗೂ ನಿವಾಸದಲ್ಲಿ ಪರಿಶೀಲನೆ ನಡೆಸಿ ವಿಚಾರಣೆಗಾಗಿ ಅವರನ್ನು ಸಿಬಿಐ ಕಚೇರಿಗೆ ಕರೆದೊಯ್ಯಲಾಗಿತ್ತು. ಸಿಬಿಐ ಕಚೇರಿಯಲ್ಲಿದ್ದಾಗಲೇ ಅವರು ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.