ಬೆಂಗಳೂರು: ದಿನದ 24 ಗಂಟೆಯೂ ಹೋಟೆಲ್ ಗಳನ್ನು ತೆರೆಯಲು ವಹಿವಾಟು ನಡೆಸಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಹೋಟೆಲ್ ಮಾಲೀಕರು ಮನವಿ ಮಾಡಿದ್ದಾರೆ.
ಬೃಹತ್ ಬೆಂಗಳೂರು ಹೋಟೆಲ್ ಗಳ ಸಂಘದ ವತಿಯಿಂದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರಿಗೆಈ ಕುರಿತಾಗಿ ಒತ್ತಾಯಿಸಲಾಗಿದೆ.
ತಡರಾತ್ರಿ ಒಂದು ಗಂಟೆಯವರೆಗೆ ಹೋಟೆಲ್ ಗಳನ್ನು ತೆರೆಯಲು ಸರ್ಕಾರದಿಂದ ಈ ಹಿಂದೆ ಅನುಮತಿ ನೀಡಲಾಗಿದ್ದರೂ ಪೊಲೀಸ್ ಇಲಾಖೆ ಒಪ್ಪಿಗೆ ನೀಡುತ್ತಿಲ್ಲ. ಇದರಿಂದಾಗಿ ಹೋಟೆಲ್, ಬೇಕರಿ, ಸ್ವೀಟ್ ಸ್ಟಾಲ್, ಐಸ್ ಕ್ರೀಮ್ ಪಾರ್ಲರ್ ಗಳಿಳಿಗೆ ತೊಂದರೆಯಾಗುತ್ತಿದ್ದು ನಿರೀಕ್ಷಿತ ವ್ಯಾಪಾರ ನಡೆಯುತ್ತಿಲ್ಲ ಎಂದು ಹೇಳಲಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರ ಹೋಟೆಲ್ ಗಳನ್ನು ದಿನದ 24 ಗಂಟೆಯೂ ತೆರೆದಿಡಲು ಮಾರ್ಗಸೂಚಿ ಹೊರಡಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೋಟೆಲ್ ಉದ್ಯಮಿಗಳಿಗೆ ಸರ್ಕಾರ ನೆರವಾಗಬೇಕು ಎಂದು ಮನವಿ ಮಾಡಲಾಗಿದೆ.
ರಾತ್ರಿ ಪಾಳಿಯ ವೈದ್ಯರು, ಕಾರ್ಮಿಕರು, ಪೊಲೀಸರು, ಉದ್ಯೋಗಿಗಳು, ಹಾಲು, ದಿನಪತ್ರಿಕೆ ವಿತರಕರು, ಕೂಲಿ ಕಾರ್ಮಿಕರು ಸೇರಿದಂತೆ ಹಲವರಿಗೆ ತಡರಾತ್ರಿ, ನಸುಕಿನ ವೇಳೆ ಊಟೋಪಚಾರದ ಅಗತ್ಯವಿದೆ. ಹೋಟೆಲ್ ಗಳು ಮುಚ್ಚಿರುವ ಕಾರಣ ಅಂತವರಿಗೆ ತೊಂದರೆಯಾಗುತ್ತದೆ. ಹೀಗಾಗಿ ದಿನದ 24 ಗಂಟೆಯೂ ರಾಜ್ಯದಾದ್ಯಂತ ಹೋಟೆಲ್ ಗಳನ್ನು ತೆರೆಯಲು ಅನುಮತಿ ನೀಡಬೇಕೆಂದು ಮನವಿ ಮಾಡಲಾಗಿದೆ.