ಬೆಂಗಳೂರು: ಮೇ 5ರವರೆಗೆ ರಾಜ್ಯಾದ್ಯಂತ ಉರಿ ಬಿಸಿಲು ಹೆಚ್ಚಳವಾಗಲಿದೆ. ಉಷ್ಣ ಮಾರುತದ ಆರ್ಭಟ ಇನ್ನೂ ಕೆಲವು ದಿನ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಿಸಿಲ ತಾಪಕ್ಕೆ ನೀರಿನ ಹಾಹಾಕಾರ ಉಂಟಾಗಿದೆ. ಹಲವು ಕಡೆ ಜನ, ಜಾನುವಾರುಗಳಿಗೆ ನೀರಿಲ್ಲದೆ ತೊಂದರೆ ಎದುರಾಗಿದೆ. ಬಿಸಿಲಿನಿಂದ ಅನಾರೋಗ್ಯ ಬಾಧಿಸುತ್ತಿದೆ. ಮಳೆಯ ನಿರೀಕ್ಷೆಯಲ್ಲಿದ್ದ ರೈತರು ಸೇರಿದಂತೆ ಜನರಿಗೆ ನಿರಾಸೆಯಾಗಿದೆ. ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯಂತೆ ರಾಜ್ಯದಲ್ಲಿ ಸದ್ಯಕ್ಕೆ ಮಳೆಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಉಷ್ಣ ಮಾರುತದ ಆರ್ಭಟ ಮುಂದುವರೆಯಲಿದೆ.
ಜನ ಮನೆಯಿಂದ ಹೊರ ಬರದಂತಾಗಿದೆ. ಏಪ್ರಿಲ್ 30 ರಿಂದ ಮೇ 5ರವರೆಗೆ ಬೀದರ್, ವಿಜಯಪುರ, ಕಲಬುರಗಿ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಕೊಪ್ಪಳ, ಹಾವೇರಿ, ಗದಗ, ಚಿತ್ರದುರ್ಗ, ದಾವಣಗೆರೆ, ವಿಜಯನಗರ, ತುಮಕೂರು, ಕೋಲಾರ, ಮಂಡ್ಯ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಶಾಖದ ಅಲೆಗಳು ಹೆಚ್ಚಾಗುವ ಸಾಧ್ಯತೆ ಇದೆ.
ಏಪ್ರಿಲ್ 30 ರಿಂದ ಮೇ 3ರವರೆಗೆ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಮತ್ತು ಅರ್ದ್ರತೆ ಸ್ಥಿತಿ ಹೆಚ್ಚಾಗುವ ಸಾಧ್ಯತೆ ಇದೆ. ತಾಪಮಾನ ಹೆಚ್ಚಳದಿಂದ ಜನರಲ್ಲಿ ಚರ್ಮ ವ್ಯಾಧಿ, ಮೈಗ್ರೇನ್, ಅತಿಸಾರ ವಾಂತಿಭೇದಿ, ತಲೆಸುತ್ತು ಮೊದಲಾದ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ.