
ಸ್ನಾನ ಮಾಡುವುದು ನಮ್ಮ ದಿನಚರಿಗಳಲ್ಲೊಂದು. ಸಾಮಾನ್ಯವಾಗಿ ಎಲ್ಲರೂ ಬಿಸಿನೀರಿನಿಂದಲೇ ಸ್ನಾನ ಮಾಡುತ್ತಾರೆ. ಕೆಲವರು ತಣ್ಣೀರಿಗೆ ಆದ್ಯತೆ ಕೊಡುತ್ತಾರೆ. ಆದರೆ ಆರೋಗ್ಯಕರ ಜೀವನಶೈಲಿಗೆ ಬಿಸಿನೀರು ಅಥವಾ ತಣ್ಣೀರಿನಲ್ಲಿ ಯಾವುದು ಹೆಚ್ಚು ಪ್ರಯೋಜನಕಾರಿ ಎಂದು ಯೋಚಿಸಿದ್ದೀರಾ?
ದೇಹವನ್ನು ಸ್ವಚ್ಛವಾಗಿಡಲು ಪ್ರತಿದಿನ ಸ್ನಾನ ಮಾಡುವುದು ಬಹಳ ಮುಖ್ಯ. ಸ್ನಾನ ಮಾಡುವುದರಿಂದ ಆರೋಗ್ಯವೂ ಉತ್ತಮವಾಗಿರುತ್ತದೆ. ದೈನಂದಿನ ಸ್ನಾನವು ಖಿನ್ನತೆ, ಆತಂಕ ಮತ್ತು ಒತ್ತಡದಂತಹ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಮಾನಸಿಕ ಏಕಾಗ್ರತೆಗಾಗಿ ಪ್ರತಿದಿನ ಸ್ನಾನ ಮಾಡಬೇಕು.
ಕೆಲವರು ಯಾವಾಗಲೂ ಉಗುರುಬೆಚ್ಚನೆಯ ನೀರಿನಿಂದ ಸ್ನಾನ ಮಾಡಲು ಇಷ್ಟಪಡುತ್ತಾರೆ. ಇನ್ನು ಕೆಲವರು ತಣ್ಣೀರಿನಲ್ಲಿ ಸ್ನಾನ ಮಾಡಲು ಬಯಸುತ್ತಾರೆ. ಇನ್ನೊಂದಷ್ಟು ಮಂದಿ ಹವಾಮಾನಕ್ಕೆ ಅನುಗುಣವಾಗಿ ನೀರನ್ನು ಆರಿಸಿಕೊಳ್ಳುತ್ತಾರೆ. ಸೆಖೆಗಾಲದಲ್ಲಿ ತಣ್ಣೀರು, ಚಳಿಗಾಲ ಮತ್ತು ಮಳೆಗಾಲದಲ್ಲಿ ಬಿಸಿನೀರಿನ ಸ್ನಾನ ಮಾಡುತ್ತಾರೆ.
ತಣ್ಣಗಿನ ಅಥವಾ ಬಿಸಿ, ಯಾವ ನೀರು ಸ್ನಾನಕ್ಕೆ ಹೆಚ್ಚು ಪ್ರಯೋಜನಕಾರಿ?
ತಣ್ಣೀರಿನಿಂದ ಸ್ನಾನ ಮಾಡುವುದರಿಂದ ಸೋಮಾರಿತನ ದೂರವಾಗುತ್ತದೆ ಮತ್ತು ಇಡೀ ದೇಹದಲ್ಲಿ ಶಕ್ತಿಯ ಅನುಭವವಾಗುತ್ತದೆ. ಇದು ಖಿನ್ನತೆಯಿಂದ ಮುಕ್ತಿ ನೀಡುತ್ತದೆ. ಶ್ವಾಸಕೋಶಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆ. ಅದೇ ಸಮಯದಲ್ಲಿ ರೋಗನಿರೋಧಕ ಶಕ್ತಿ ಕೂಡ ಸುಧಾರಿಸುತ್ತದೆ. ಇದರಿಂದಾಗಿ ಸೋಂಕಿನ ಅಪಾಯ ಕಡಿಮೆಯಾಗುತ್ತದೆ.
ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ಕೂಡ ಪ್ರಯೋಜನಗಳಿವೆ. ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ದೇಹವು ಚೆನ್ನಾಗಿ ಶುಚಿಯಾಗುತ್ತದೆ. ಸ್ನಾಯುಗಳಲ್ಲಿನ ನೋವು ಕಡಿಮೆಯಾಗುತ್ತದೆ. ಗಂಟಲಿನ ಕಿರಿಕಿರಿ ದೂರವಾಗುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಇದು ನಿಯಂತ್ರಣದಲ್ಲಿಡುತ್ತದೆ. ಇದರಿಂದಾಗಿ ಮಧುಮೇಹದ ಅಪಾಯ ಕಡಿಮೆಯಾಗುತ್ತದೆ. ಕೆಮ್ಮು ಮತ್ತು ಶೀತವಿದ್ದಾಗ ಬಿಸಿ ನೀರಿನಿಂದ ಸ್ನಾನ ಮಾಡುವುದು ಹೆಚ್ಚು ಪ್ರಯೋಜನಕಾರಿ.
ಮಕ್ಕಳು ಅಥವಾ ಹಿರಿಯರು ಬಿಸಿನೀರಿನಲ್ಲಿಯೇ ಸ್ನಾನ ಮಾಡುವುದು ಸೂಕ್ತ. ನಿಮ್ಮ ದೇಹಕ್ಕೆ ಅನುಗುಣವಾಗಿ ನೀರನ್ನು ಆರಿಸಿ. ನಿಮಗ್ಗೆ ಪಿತ್ತದ ಸಮಸ್ಯೆಯಿದ್ದರೆ ಸ್ನಾನಕ್ಕೆ ತಣ್ಣೀರನ್ನು ಬಳಸಿ. ಅತಿಯಾದ ಕಫದ ಸಮಸ್ಯೆ ಇದ್ದರೆ ಬಿಸಿ ನೀರನ್ನು ಬಳಸಿ.
ಅಜೀರ್ಣ ಅಥವಾ ಯಕೃತ್ತಿನ ಅಸ್ವಸ್ಥತೆಯಿಂದ ಬಳಲುತ್ತಿದ್ದರೆ ತಣ್ಣೀರಿನಿಂದ ಸ್ನಾನ ಮಾಡಿ. ವಾತ ಸಂಬಂಧಿತ ಅಸ್ವಸ್ಥತೆಯಿಂದ ಬಳಲುತ್ತಿದ್ದರೆ ಬಿಸಿ ನೀರಿನ ಸ್ನಾನ ಸೂಕ್ತ. ವರ್ಕ್ ಔಟ್ ಬಳಿಕ ಬಿಸಿನೀರಿನಲ್ಲಿಯೇ ಸ್ನಾನ ಮಾಡಬೇಕು. ಬೆಳಗ್ಗೆ ಬೇಗ ಸ್ನಾನ ಮಾಡುವ ಅಭ್ಯಾಸವಿದ್ದರೆ ತಣ್ಣೀರು ಉತ್ತಮ. ರಾತ್ರಿ ಹೊತ್ತಿನಲ್ಲಿ ಬಿಸಿ ನೀರನ್ನು ಬಳಸಬೇಕು.