ಬೆಂಗಳೂರು: ಶಿವರಾತ್ರಿಗೆ ಮೊದಲೇ ಬೇಸಿಗೆ ಬಿಸಿಲಿನ ಕಾವು ಹೆಚ್ಚಾಗುತ್ತಿದೆ. ಕೆಲವಡೆ ತಾಪಮಾನ ಹೆಚ್ಚಾಗಿದ್ದು, ಬೇಸಿಗೆ ಮೊದಲೇ ಬಿಸಿಲ ಝಳ ಹೆಚ್ಚಾಗತೊಡಗಿದೆ. ತಿಂಗಳಾಂತ್ಯದವರೆಗೂ ಸೆಖೆಯ ವಾತಾವರಣ ಮುಂದುವರೆಯುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಶಿವರಾತ್ರಿ ನಂತರ ಬಿಸಿಲ ಬೇಗೆ ಹೆಚ್ಚಾಗುತ್ತದೆ.
ಆದರೆ, ಶಿವರಾತ್ರಿಗೆ ಇನ್ನೂ ಒಂದು ವಾರ ಇರುವಾಗಲೇ ತಾಪಮಾನ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಗರಿಷ್ಠ 31.5 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ತಿಂಗಳ ಅಂತ್ಯದವರೆಗೆ ಮುಂದುವರೆಯುವ ಸಾಧ್ಯತೆ ಇದೆ. ಮಾರ್ಚ್ ನಿಂದ ಒಂದೆರಡು ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನ ಹೆಚ್ಚಾಗಲಿದೆ ಎಂದು ಹೇಳಲಾಗಿದೆ.
ಗರಿಷ್ಠ ತಾಪಮಾನ ಮುಂದಿನ ತಿಂಗಳುಗಳಲ್ಲಿ ಗರಿಷ್ಠ 31 ರಿಂದ 34 ಡಿಗ್ರಿ ಸೆಲ್ಸಿಯಸ್ ವರೆಗೆ ಇರಲಿದೆ. ತಾಪಮಾನ ಹೆಚ್ಚಾಗುತ್ತಿದ್ದಂತೆ ಬೇಸಿಗೆ ಮುನ್ನವೇ ಬಿಸಿಲು ಝಳ ಹೆಚ್ಚಾಗತೊಡಗಿದೆ. ಬಿಸಿಲ ದಗೆಯಿಂದ ಜನಸಾಮಾನ್ಯರು ತತ್ತರಿಸುತ್ತಿದ್ದು, ಮುಂದಿನ ವಾರಗಳ ನಂತರ ಸೆಕೆಯ ವಾತಾವರಣ ಮತ್ತಷ್ಟು ಹೆಚ್ಚಾಗಲಿದೆ ಎನ್ನಲಾಗಿದೆ.